ಉದಯವಾಹಿನಿ, ಹೊಯ್ಸಳಕಟ್ಟೆ: ಚಿಕ್ಕನಾಯಕನಹಳ್ಳಿ ತಾಲೂಕು ಹೊಯ್ಸಳಕಟ್ಟೆ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚುಚ್ಚುಮದ್ದು ಪಡೆದ ನಂತರ ಒಂದೂವರೆ ತಿಂಗಳ ಗಂಡು ಮಗು ಗುರುವಾರ ಮೃತಪಟ್ಟಿದ್ದು, ಪಾಲಕರು ಆಸ್ಪತ್ರೆ ಮುಂಭಾಗ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ.ಸೋಮನಹಳ್ಳಿಯ ಮಧು ಮತ್ತು ಶೃತಿ ದಂಪತಿಯ ಎರಡು ತಿಂಗಳ ಪುತ್ರ ಮೃತಪಟ್ಟಿದ್ದು, ವೈದ್ಯರು ಹಾಗೂ ಸಿಬ್ಬಂದಿಯ ನಿರ್ಲಕ್ಷ್ಯದಿಂದಲೇ ಮಗು ಮೃತಪಟ್ಟಿದೆ. ಆಸ್ಪತ್ರೆಗೆ ಬರುವ ಮುನ್ನ ಆರೋಗ್ಯವಾಗಿದ್ದ ಮಗು ಚುಚ್ಚುಮದ್ದು ಪಡೆದ ನಂತರ ಕೊನೆಯುಸಿರೆಳೆದಿದೆ ಎಂದು ಮಗುವಿನ ತಂದೆ ಮಧು ಕಣ್ಣಿರಿಟ್ಟಿದ್ದಾರೆ. ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಆಸ್ಪತ್ರೆ ಮುಂದೆ ಜಮಾಯಿಸಿ ತಕ್ಷಣ ವೈದ್ಯಾಧಿಕಾರಿ ಹಾಗೂ ಸಿಬ್ಬಂದಿಯನ್ನು ಆಮಾನತು ಮಾಡುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದು ವೈದ್ಯರ ವಿರುದ್ಧ ದಿಕ್ಕಾರ ಕೂಗಿದರು.ವೈದ್ಯರು ರೋಗಿಗಳಿಗೆ ಚಿಕಿತ್ಸೆ ನೀಡುವಾಗಲೂ ಫೋನ್ ಬಳಸುತ್ತಾರೆ. ಚಿಕಿತ್ಸೆ ನೀಡಲು ಪ್ರತಿ ರೋಗಿಯ ಬಳಿ 20 ರಿಂದ 100 ರೂಪಾಯಿವರೆಗೂ ಲಂಚ ಪಡೆಯುತ್ತಾರೆ, ಬೆಳಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆವರೆಗೆ ಕೆಲಸ ನಿರ್ವಹಿಸುತ್ತಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.ಸ್ಥಳಕ್ಕೆ ಶಾಸಕ ಸಿ.ಬಿ.ಸುರೇಶ್‌ಬಾಬು ಆಗಮಿಸಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಅಲ್ಲದೆ ಪಾರದರ್ಶಕ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ನಂತರ ಕುಟುಂಬಸ್ಥರು ಪ್ರತಿಭಟನೆ ವಾಪಸ್ ಪಡೆದರು. ಈ ಬಗ್ಗೆ ಹುಳಿಯಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
