ಉದಯವಾಹಿನಿ ,ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಇದೀಗ ಮತ್ತೊಂದು ಸ್ವರೂಪ ಪಡೆದುಕೊಂಡಿದ್ದು, ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಶಾಸಕ ವಿ.ಸುನೀಲ್ಕುಮಾರ್ ರಾಜೀನಾಮೆ ನೀಡಲು ಮುಂದಾಗಿದ್ದಾರೆ.
ಸದ್ಯ ಅವರು ತಮ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲವಾದರೂ ಯಾವುದೇ ಸಂದರ್ಭ ದಲ್ಲೂ ಪ್ರಧಾನ ಕಾರ್ಯದರ್ಶಿ ಹುದ್ದೆ ತೊರೆಯಬಹುದೆಂದು ಹೇಳಲಾಗುತ್ತಿದೆ ಯಾದರೂ ಈವರೆಗೂ ದೃಢಪಟ್ಟಿಲ್ಲ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಬದಲಾವಣೆ ಮಾಡಬೇಕೆಂದು ಖಾಯಂ ಭಿನ್ನಮತೀಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ ಮತ್ತಿತರರು ಒತ್ತಾಯ ಮಾಡುತ್ತಿರುವ ಬೆನ್ನಲ್ಲೇ ಸುನೀಲ್ಕುಮಾರ್ ನಿರ್ಧಾರ ಅಚ್ಚರಿ ಮೂಡಿಸಿದೆ.
ಮೂಲತಃ ಸಂಘ ಪರಿವಾರದ ಜೊತೆ ಗುರುತಿಸಿಕೊಂಡಿರುವ ಅವರು ಯಾವುದೇ ಭಿನ್ನಮತೀಯ ಚಟುವಟಿಕೆಗಳಲ್ಲಿ ಕಾಣಿಸಿಕೊಳ್ಳದೆ ಸಮತೋಲನದ ಅಂತರ ಕಾಪಾಡಿಕೊಂಡೇ ಬಂದಿದ್ದರು. ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಸುನೀಲ್ಕುಮಾರ್ ಅವರನ್ನು ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನೇಮಕ ಮಾಡುವ ಮೂಲಕ ಮಹತ್ವದ ಹುದ್ದೆಯನ್ನೇ ನೀಡಲಾಗಿತ್ತು.
ಆರ್ಎಸ್ಎಸ್ ಕಟ್ಟಾಳೆಂದೇ ಗುರುತಿಸಿಕೊಂಡಿರುವ ಅವರು ಒಂದು ಕಡೆ ವಿಜಯೇಂದ್ರಗೂ ಜೈ ಅಂದವರೇ ಮತ್ತೊಂದು ಕಡೆ ಯತ್ನಾಳ್ ಬಣಕ್ಕೂ ತೆರೆಮರೆಯಲ್ಲೇ ಸೈ ಎಂದವರೇ. ಈಗ ಅತ್ಯಂತ ಪ್ರಮುಖ ಹುದ್ದೆ ಎನಿಸಿದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಲು ಮುಂದಾಗಿರುವುದು ಹಲವು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ.
