ಉದಯವಾಹಿನಿ, ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಖಡಕ್ ಎಚ್ಚರಿಕೆ ನೀಡಿದ ಬೆನ್ನಲ್ಲೆ ಡಿನ್ನರ್ ಮಿಟಿಂಗ್ ಹೆಸರಿನಲ್ಲಿ ಹೇಳಿಕೆಗಳನ್ನು ನೀಡುತ್ತಿದ್ದ ನಾಯಕರು ಮೌನಕ್ಕೆ ಶರಣಾಗಿದ್ದಾರೆ. ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ರಾಜಕೀಯ ಪ್ರಶ್ನೆಗಳಿಗೆ ಉತ್ತರ ನೀಡಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.
ನೀವು ಎಷ್ಟೇ ಕೇಳಿದರೂ ನಾನು ರಾಜಕೀಯ ವಿಚಾರ ಮಾತಾಡಲ್ಲ. ಕೆಲಸ ಮಾಡಿ ಎಂದು ನಮ ಎಐಸಿಸಿ ಅಧ್ಯಕ್ಷರು ಹೇಳಿದ್ದಾರೆ. ಅದಕ್ಕಾಗಿ ರಾಜಕೀಯ ಮಾತನಾಡಲ್ಲ ಎಂದು ಹೇಳಿ ಜಾರಿಕೊಂಡರು. ಮುಡಾ ಕೇಸ್ ನಲ್ಲಿ ಜಾರಿ ನಿರ್ದೇಶನಾಲಯ ಆಸ್ತಿ ಮುಟ್ಟುಗೋಲು ಹಾಕಿಕೊಂಡಿರುವುದನ್ನು ನಾನು ಗಮನಿಸಿದ್ದೇನೆ.

ಮುಟುಗೋಲು ಪ್ರಕ್ರಿಯೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾತ್ರದ ಬಗ್ಗೆ ಎಲ್ಲಿಯೂ ಉಲ್ಲೇಖ ಇಲ್ಲ. ಅದರ ಹೊರತಾಗಿಯೂ ಬಿಜೆಪಿಯವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಹೇಳುತ್ತಿರುವುದು ಆಧಾರ ರಹಿತ. ಈ ಹಿಂದೆಯೂ ಸಿದ್ದರಾಮಯ್ಯ ಅವರ ರಾಜೀನಾಮೆ ನೀಡಬೇಕು ಎಂದು ಒತ್ತಾಯ ಮಾಡುತ್ತಿದ್ದರು. ಜಾರಿ ನಿರ್ದೇಶನಾಲಯ ಪತ್ತೆ ಹಚ್ಚಿರುವುದರಲ್ಲಿ ನ್ಯಾಯ ರೀತಿ ಕ್ರಮ ಕೈಗೊಳ್ಳಲಿ. ಸಿದ್ದರಾಮಯ್ಯ ಪ್ರಭಾವ ಇದೆ ಎಂದು ಜಾರಿ ನಿರ್ದೇಶನಾಲಯ ಎಲ್ಲಿಯೂ ಹೇಳಿಲ್ಲ. ದಾಖಲಾತಿ ಇಟ್ಟುಕೊಂಡು ಮಾನಾಡಬೇಕು ಎಂದು ಹೇಳಿದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿಲ್ಲ, ಚೆನ್ನಾಗಿದೆ. ದರೋಡೆ ಸೇರಿದಂತೆ ಯಾವುದೇ ಕೃತ್ಯಗಳ ಕುರಿತು ಮಾಹಿತಿ ಸಿಕ್ಕರೆ ಅದನ್ನು ತಡೆಯಬಹುದು. ಬೀದರ್ ಹಾಗೂ ಮಂಗಳೂರು ಪ್ರಕರಣಗಳಲ್ಲಿ ಶಸ್ತ್ರ ಸಜ್ಜಿತ ಭದ್ರತಾ ಸಿಬ್ಬಂದಿಗಳು ಇರಲಿಲ್ಲ. ಮೂಲ ಲೋಪವನ್ನು ನೋಡಬೇಕಾಗುತ್ತದೆ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!