ಉದಯವಾಹಿನಿ, ಬೆಂಗಳೂರು: ರಾಜ್ಯದ ಔದ್ಯೋಗಿಕ ಪ್ರಗತಿಯಲ್ಲಿ ಮಹತ್ವದ ಪಾತ್ರ ವಹಿಸಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಇಂದಿನಿಂದ ಆರಂಭಗೊಂಡಿದ್ದು ಸುಮಾರು 10 ಲಕ್ಷ ಕೋಟಿ ರೂ.ಗಳ ಹೂಡಿಕೆಯ ನಿರೀಕ್ಷೆ ವ್ಯಕ್ತವಾಗಿದೆ.ಸುಮಾರು 20 ಕ್ಕೂ ಹೆಚ್ಚು ದೇಶಗಳ ಪ್ರಮುಖ ಉದ್ಯಮಿಗಳು, 150ಕ್ಕೂ ಹೆಚ್ಚು ಪ್ರದರ್ಶಕರು ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದು, ಈ ಸಮಾವೇಶಕ್ಕಾಗಿ ರಾಜ್ಯಸರ್ಕಾರ ಸಕಲ ಸಿದ್ಧತೆಗಳನ್ನು ಕೈಗೊಂಡಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಬಂಡವಾಳ ಹೂಡಿಕೆಗೆ ಜಾಗತಿಕ ವೇದಿಕೆಯನ್ನು ಕಲ್ಪಿಸಿಕೊಡಲಾಗುತ್ತಿದೆ. ದೇಶ ಹಾಗೂ ವಿದೇಶಿಯ ಪ್ರಮುಖ ಕಂಪನಿಗಳು, ಮುಂದುವರೆದ ರಾಷ್ಟ್ರಗಳ ಉದ್ಯಮಿಗಳು ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಪರಸ್ಪರ ಮುಖಾಮುಖಿಯಾಗಲಿದ್ದಾರೆ.
ಇದಕ್ಕಾಗಿ 30 ಗೋಷ್ಠಿಗಳನ್ನು ಆಯೋಜಿಸಿದ್ದು, 100ಕ್ಕೂ ಹೆಚ್ಚು ಭಾಷಣಕಾರರು ರಾಜ್ಯದ ನೈಸರ್ಗಿಕ, ಮಾನವ ಸಂಪನೂಲಗಳ ಬಗ್ಗೆ ವಿವರಣೆ ನೀಡಲಿದ್ದು, ಕೈಗಾರಿಕಾ ಸ್ನೇಹಿ ವಾತಾವರಣದ ಬಗ್ಗೆ ಹೂಡಿಕೆದಾರರಿಗೆ ಮನವರಿಕೆ ಮಾಡಿಕೊಡಲಿದ್ದಾರೆ.ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮಾಹಿತಿ ತಂತ್ರಜ್ಞಾನ ಸೇರಿದಂತೆ ವಿವಿಧ ಇಲಾಖೆಗಳು ಸಮಾವೇಶದ ಆಯೋಜನೆಗೆ ಟೊಂಕ ಕಟ್ಟಿ ನಿಂತಿವೆ.
ಬೆಂಗಳೂರು ಅರಮನೆ ಮೈದಾನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಸಮಾವೇಶಕ್ಕೆ ಚಾಲನೆ ನೀಡಲಾಯಿತು.ರಕ್ಷಣಾ ಸಚಿವ ರಾಜನಾಥ ಸಿಂಗ್, ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ, ಎಚ್.ಡಿ.ಕುಮಾರಸ್ವಾಮಿ, ಶೋಭಾ ಕರಂದ್ಲಾಜೆ, ವಿ.ಸೋಮಣ್ಣ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಮತ್ತಿತರರು ಸಮಾವೇಶಕ್ಕೆ ಸಾಕ್ಷಿಯಾದರು.
