ಉದಯವಾಹಿನಿ, ಕಲಬುರಗಿ : ದೇಶಾದ್ಯಂತ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರ ನೇಮಕಾತಿ ಪ್ರಕ್ರಿಯೆ ಹಂತಹಂತವಾಗಿ ಕೈಗೊಳ್ಳಲಾಗುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಇಲ್ಲಿನ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಮೂರು ರಾಜ್ಯಗಳಲ್ಲಿ ಪಿಸಿಸಿ ಅಧ್ಯಕ್ಷರ ನೇಮಕ ಮಾಡಲಾಗಿದೆ. ಆದಷ್ಟು ಬೇಗ ಹಂತ ಹಂತವಾಗಿ ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ನೇಮಕ ನಡೆಯಲಿದೆ. ಇದಕ್ಕೆ ಕರ್ನಾಟಕ ಹೊರತಾಗಿಲ್ಲ ಎಂದರು.
ನಿನ್ನೆಯಷ್ಟೇ ಒಡಿಸ್ಸಾ ರಾಜ್ಯ ಪಿಸಿಸಿ ಅಧ್ಯಕ್ಷರ ನೇಮಕ ಮಾಡಲಾಗಿದೆ, ಅಲ್ಲಿ ಹಿಂದುಳಿದ ವರ್ಗದವರನ್ನು ನೇಮಕ ಮಾಡಲಾಗಿದೆ. ಇನ್ನೆರಡು ದಿನಗಳಲ್ಲಿ ಇನ್ನೆರಡು ರಾಜ್ಯಗಳ ಪಿಸಿಸಿ ಅಧ್ಯಕ್ಷರ ನೇಮಕ ಮಾಡಲಾಗುವುದು. ಮುಂದಿನ 8 ದಿನಗಳಲ್ಲಿ ಉಳಿದ ರಾಜ್ಯಗಳ ಪಿಸಿಸಿ ಅಧ್ಯಕ್ಷರ ನೇಮಕ ಪ್ರಕ್ರಿಯೆ ನಡೆಯಲಿದೆ ಎಂದರು.
ಇತ್ತೀಚೆಗೆ ದೆಹಲಿಯ ತಮ್ಮ ನಿವಾಸದಲ್ಲಿ ರಾಜ್ಯದ ಗೃಹ ಸಚಿವ ಡಾ.ಜಿ.ಪರಮೇಶ್ವರ ಹಾಗೂ ಲೋಕೋಪಯೋಗಿ ಖಾತೆ ಸಚಿವ ಸತೀಶ್ ಜಾರಕಿಹೊಳಿ ತಮ್ಮನ್ನು ಭೇಟಿ ಮಾಡಿ ಚರ್ಚಿಸಿದ ಕುರಿತು ಸುದ್ದಿಗಾರರು ಪ್ರಸ್ತಾಪಿಸಿದಾಗ, ‘ನಾನು ಈ ರಾಜ್ಯದವನು ಎಐಸಿಸಿ ಅಧ್ಯಕ್ಷನಾಗಿದ್ದೇನೆ. ಹೀಗಾಗಿ ನಮ್ಮ ರಾಜ್ಯದ ನಾಯಕರು ನನ್ನ ಭೇಟಿಯಾಗೋಕೆ ಬರುತ್ತಾರೆ. ನಮ್ಮ ಜೊತೆ ಆತ್ಮೀಯರಾಗಿ ಇರುವವರು ಪೆÇೀನ್ ಮಾಡಿ ಬರುತ್ತಾರೆ. ಹಾಗೆ ಬರುವವರನ್ನು ಬೇಡ ಅನ್ನೋಕ್ಕಾಗುತ್ತಾ? ಬೇಡ ಅನ್ನೋಕ್ಕಾಗುತ್ತಾ..? ಅದರೆಲ್ಲೇನೂ ವಿಶೇಷ ಇಲ್ಲ. ಪರಮೇಶ್ವರ, ಜಾರಕಿಹೊಳಿ ಭೇಟಿ ಬಗ್ಗೆ ಗೊಂದಲ ಸೃಷ್ಟಿ ಮಾಡೋದು ಬೇಡ. ದಯವಿಟ್ಟು ಮಾಧ್ಯಮದವರು ಗೊಂದಲ ಸೃಷ್ಟಿ ಮಾಡಬೇಡಿ’ ಎಂದು ಮನವಿ ಮಾಡಿದರು.
