ಉದಯವಾಹಿನಿ, ಆಲೂರು: ತಾಲ್ಲೂಕಿನ ಕೆಂಚಮ್ಮನ ಹೊಸಕೋಟೆ ಮತ್ತು ಕುಂದೂರು ಹೋಬಳಿಗೆ ಸೇರಿದ ಸುಮಾರು 48 ಹಳ್ಳಿಗರ ಧಾರ್ಮಿಕ ಸಂಬಂಧ ಬೆಸೆಯುವ ಅಡಿಬೈಲು ಗ್ರಾಮದ ರಂಗನಾಥಸ್ವಾಮಿ ದೇವರ ಐತಿಹಾಸಿಕ ಜಾತ್ರೆ ಫೆ.15 ಮತ್ತು 16ರಂದು ನಡೆಯಲಿದೆ. ಇದರ ಅಂಗವಾಗಿ ದೇವಸ್ಥಾನದಲ್ಲಿ ಫೆ.8ರಿಂದ 17ರವರೆಗೆ ಉತ್ಸವಗಳು ನಡೆಯಲಿವೆ. ಸಂಕ್ರಾಂತಿಯಂದು ಕುಂದೂರು ಹೋಬಳಿ ವ್ಯಾಪ್ತಿಗೆ ಒಳಪಡುವ ಸುಮಾರು 20 ಗ್ರಾಮಗಳಿಗೆ ಅಡ್ಡೆ ದೇವರು ಹೋಗುತ್ತದೆ. ಉತ್ಸವ ಮುಗಿದ ನಂತರ ಜಾತ್ರೆ ನಡೆಯುವ ಎಳು ದಿನಗಳ ಮೊದಲು ಬೆಟ್ಟದಲ್ಲಿರುವ ದೇವಾಲಯಕ್ಕೆ ಕರೆತರಲಾಗುತ್ತದೆ.
ಶನಿವಾರ (ಫೆ.15) ದೊಡ್ಡ ಹರಿಸೇವೆ, ಭಾನುವಾರ, ಸೋಮವಾರ ಹಕ್ಕಿನ ಉತ್ಸವ ನಡೆಯುತ್ತದೆ. ಮಂಗಳವಾರ ಬಿಂದಿಗಮ್ಮ ಕಳಸ ಹೊರುವ ಪೂಜಾರಿಗೆ ತಲೆ ಬೋಳಿಸಿ, ಹಸೆ ಹಾಕಿ, ಕಾಸೆ ವೇಷದೊಂದಿಗೆ ದೇವಾಲಯಕ್ಕೆ ಕಳುಹಿಸಿ ಕೊಡಲಾಗುತ್ತದೆ. ಇವರು ಜಾತ್ರಾ ಮಹೋತ್ಸವ ಮುಗಿಯುವವರೆಗೂ ಹಣ್ಣು-ಹಂಪಲು ಬಿಟ್ಟರೆ ಬೇರೆ ಏನನ್ನೂ ಸೇವಿಸದೇ ಪೂಜೆಯಲ್ಲಿ ತೊಡಗುತ್ತಾರೆ. ರಂಗನಾಥಸ್ವಾಮಿ-ಬಿಂದಿಗಮ್ಮ ಕಲ್ಯಾಣೋತ್ಸವದ ವೈಭವವನ್ನು ಆನಂದಿಸುವುದು ಈ ಜಾತ್ರೆಯ ವಿಶೇಷ.
