ಉದಯವಾಹಿನಿ, ಹುಲಸೂರ: ಸಮೀಪದ ಭಾಲ್ಕಿ ತಾಲ್ಲೂಕಿನ ಮೇಹಕರ ಗ್ರಾಮದಲ್ಲಿ
ವಿರೂಪಾಕ್ಷೇಶ್ವರ ಜಾತ್ರಾ ಮಹೋತ್ಸವದದ ಅಂಗವಾಗಿ ಬುಧವಾರ ದೇವರ ಮೂರ್ತಿಯ ಪಲ್ಲಕ್ಕಿ ಮೆರವಣಿಗೆ ಸಂಭ್ರಮದಿಂದ ನಡೆಯಿತು.
ಪಲ್ಲಕ್ಕಿ ಮೆರವಣಿಗೆ ಮೇಹಕರ ಕಟ್ಟಿಮನಿ ಸಂಸ್ಥಾನದ ರಾಜೇಶ್ವರ ಶಿವಾಚಾರ್ಯರು ಚಾಲನೆ ನೀಡಿದರು.
ಮೆರವಣಿಗೆಯು ಹನುಮಾನ ದೇವಸ್ಥಾನಕ್ಕೆ ಬಂದು ತಲುಪಿತು. ಜಾತ್ರೆಯ 11 ದಿನಗಳ ಕಾಲ ರಾಜೇಶ್ವರ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಪ್ರತಿ ದಿನ ಮಹಾರುದ್ರಾಭಿಷೇಕ ಪೂಜೆ, ಜಪಯಜ್ಞ, ಶಿವದೀಕ್ಷಾ, ಬಿಲ್ಯಾರ್ಚನೆ, ಕುಂಕುಮಾರ್ಚನೆ ಹಾಗೂ ಸಾಯಂಕಾಲ ಧರ್ಮಸಭೆ ಜರುಗಿತು.
ಪಲ್ಲಕ್ಕಿ ಉತ್ಸವದಲ್ಲಿ ಡೊಳ್ಳು ಕುಣಿತ, ಗ್ರಾಮದ ಆರ್ಕೇಸ್ಟ್ರಾದವರ ಸಂಗೀತ ವಾದ್ಯಮೇಳಗಳು ಮೆರವಣಿಗೆ ಉದ್ದಕ್ಕೂ ಸಂಚರಿಸಿದವು. ಮೆರವಣಿಗೆಯಲ್ಲಿ ಪಟ್ಟಣದ ಸಾವಿರಾರು ಮಹಿಳೆಯರು, ವಯೋವೃದ್ಧರು ಹಾಗೂ ಮಕ್ಕಳು ಭಾಗವಹಿಸಿದ್ದರು. ಸಾಯಗಾಂವ, ಅಟ್ಟಿರಗಾ, ವಾಂಝರಖೇಡ ಸೇರಿ ನಾನಾ ಗ್ರಾಮಗಳಿಂದ ಬಂದಿದ್ದ ಸಾವಿರಾರು ಭಕ್ತರು ದೇವರ ದರ್ಶನ ಪಡೆದರು.
ಸಾವಿರ ದೀಪೋತ್ಸವ: ವಿರೂಪಾಕ್ಷೇಶ್ವರ ಜಾತ್ರಾ ಮಹೋತ್ಸವದ ಸಂಜೆ ದೇವಾಲಯದಲ್ಲಿ ಸಾವಿರ ಮಣ್ಣಿನ ಹಣತೆ ಹಾಗೂ ವಿದ್ಯುತ್ ದೀಪಗಳು ಬೆಳಗುತ್ತಿದ್ದಂತೆಯೇ ಭಕ್ತರಿಂದ ಜೈಕಾರಗಳು ಮೊಳಗಿದವು.
ದೇವಸ್ಥಾನದ ಆವರಣದಲ್ಲಿ ಇಟ್ಟಿದ್ದ ದೀಪಸ್ತಂಭಗಳಲ್ಲಿ ಪ್ರತಿಯೊಬ್ಬರೂ ಬತ್ತಿಗಳನ್ನು ಬೆಳಗಿಸಲು ಮುಂದಾದರು. ಹೊಸ ಬಟ್ಟೆಗಳನ್ನು ಧರಿಸಿ, ಅಲಂಕಾರ ಮಾಡಿಕೊಂಡು, ಹಣೆಗೆ ವಿಭೂತಿ ಧರಿಸಿ ಬಂದಿದ್ದ ಜನ ಬರಿಗಾಲಲ್ಲೇ ಓಡಾಡಿ ದೀಪಗಳನ್ನು ಬೆಳಗಿ ಸಂಭ್ರಮಿಸಿದರು. ಮಹಿಳೆಯರು, ಪುರುಷರು, ಯುವಕ-ಯುವತಿಯರು, ಹಿರಿಯರು ಗುಂಪು ಗುಂಪಾಗಿ ಬಂದು ಹಣತೆ ಹಚ್ಚಿದರು.
