ಉದಯವಾಹಿನಿ, ಬೆಂಗಳೂರು: ಚುನಾವಣೆ ಸಂದರ್ಭದಲ್ಲಿ ಮತ್ತು ಫಲಿತಾಂಶದ ಬಳಿಕವೂ ಲಿಂಗಾಯತ ವಿಚಾರವಾಗಿ ಕಾಂಗ್ರೆಸ್ ವಿರುದ್ಧ ಟೀಕೆ ಮಾಡಿದ್ದ ಬಿಜೆಪಿ ಇದೀಗ ಮತ್ತೆ ಲಿಂಗಾಯತ ಅಸ್ತ್ರವನ್ನು ಪ್ರಯೋಗಿಸಿದೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕಾಂಗ್ರೆಸ್ ಪಕ್ಷವನ್ನು ಗುರಿಯಾಗಿಸಿ ಲಿಂಗಾಯತ ಬಾಣ ಬಿಟ್ಟಿದ್ದಾರೆ. ಭಾರತೀಯ ಜನತಾ ಪಾರ್ಟಿ ಲಿಂಗಾಯತ ಸಮುದಾಯವನ್ನು ಯಾವಾಗಲೂ ಗೌರವದಿಂದಲೇ ನೋಡಿಕೊಂಡು ಬಂದಿದೆ. ಬಿಜೆಪಿ ಎಂಬುವ ಒಂದೇ ಗುಡಿ ಇದ್ದು ಎಲ್ಲರಿಗೂ ಪ್ರವೇಶವಿದೆ. ಬಿಜೆಪಿ ರಾಜ್ಯದಲ್ಲಿ ಕಡಿಮೆ ಅವಧಿಯಲ್ಲಿ ಅಧಿಕಾರ ನಡೆಸಿದ್ದರೂ ನನ್ನ ಸಮೇತವಾಗಿ ನಾಲ್ವರು ಮುಖ್ಯಮಂತ್ರಿಗಳಲ್ಲಿ ಮೂವರು ಲಿಂಗಾಯತ ಸಮುದಾಯಕ್ಕೆ ಸೇರಿದವರನ್ನು ಮುಖ್ಯಮಂತ್ರಿ ಮಾಡಿರುವುದೇ ಇದಕ್ಕೆ ಸಾಕ್ಷಿ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷ ಕಳೆದ ಮೂವತ್ತೈದು ವರ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮುಖ್ಯಮಂತ್ರಿ ಸ್ಥಾನ ನೀಡದಿರುವುದು ಜಗತ್ತಿಗೆ ಗೊತ್ತು. ಈಗ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತವಿದೆ. ಲಿಂಗಾಯತ ಸಮುದಾಯದ ಮೇಲೆ ನಿಜವಾದ ಪ್ರೀತಿ ಇದ್ದರೆ ನೀವು ಲಿಂಗಾಯತ ಸಮುದಾಯದವರನ್ನು ಮುಖ್ಯಮಂತ್ರಿ ಮಾಡುತ್ತಿದ್ದಿರಿ ಎಂದಿರುವ ಬೊಮ್ಮಾಯಿ, ನಮ್ಮ ಪಕ್ಷದ ವಿಚಾರದಲ್ಲಿ ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ಕಾಂಗ್ರೆಸ್ಗೆ ಹೇಳಿದ್ದಾರೆ.
