ಉದಯವಾಹಿನಿ, ಶಿವಮೊಗ್ಗ: ಜಿ.ಪಂ., ತಾ.ಪಂ. ಚುನಾವಣೆ ದೃಷ್ಟಿಯಿಂದ ರಾಜ್ಯದಾದ್ಯಂತ ಜೂನ್ 22 ಹಾಗು 23 ರಂದು ಬಿಜೆಪಿಯ 7 ತಂಡ ಪ್ರವಾಸ ಮಾಡಲಿದ್ದು,ನನ್ನ ನೇತೃತ್ವದಲ್ಲಿ ಒಂದು ತಂಡ ಹುಬ್ಬಳ್ಳಿ, ಗದಗ, ಹಾವೇರಿಯಲ್ಲಿ ಪ್ರವಾಸ ಮಾಡಲಿದೆ ಎಂದು ಬಿಜೆಪಿ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ತಿಂಗಳು ಆಗಿದೆ. ಈ ಸರಕಾರ ನೇರವಾಗಿ ಹಿಂದೂ ವಿರೋಧಿ. ಬಡಜನರಿಗೆ ಮೋಸ ಮಾಡುವ ಸರಕಾರ. ಬಡವರಿಗೆ 10 ಕೆಜಿ ಅಕ್ಕಿ ಕೊಡುತ್ತೇವೆ ಅಂತ ಹೇಳಿದರು.ಕೇಂದ್ರ ಸರಕಾರ ಐದು ಕೆಜಿ ಕೊಡುತ್ತಿತ್ತು. ಚುನಾವಣೆಯಲ್ಲಿ ಗ್ಯಾರಂಟಿ ಕೊಡುವ ಸಂದರ್ಭದಲ್ಲಿ ಮೋದಿ ಅವರಿಗೆ ಈ ಬಗ್ಗೆ ಕೇಳಿದ್ಧರೆ? ಅವರಿಗೆ ಕೇಳದೇ ಗ್ಯಾರಂಟಿ ಘೋಷಣೆ ಮಾಡಿದ್ದೀರಾ? ಬಡವರ ಓಟು ಹಾಕಿಸಿಕೊಂಡು ಮೋಸ ಮಾಡ್ತಿದ್ದೀರಿ. ಬಡವರ ಶಾಪ ತಟ್ಟೇ ತಟ್ಟುತ್ತದೆ ಎಂದು ಕಿಡಿ ಕಾರಿದರು.ಪದವೀಧರ ಯುವಕರಿಗೆ ಮೂರು ಸಾವಿರ ಕೊಡ್ತೀವಿ ಅಂದರು, ಈ ವರ್ಷ ಪಾಸಾಗಿರುವ ಯುವಕರಿಗೆ ಅಂತೇಳಿ ಮೋಸ ಮಾಡಿದರು. ವಿದ್ಯುತ್ ಏರಿಕೆ ಮಾಡಿ ಆಹಾಕಾರ ಎದ್ದಿದೆ. ಕೈಗಾರಿಕೆಗಳು ಮುಚ್ಚುವ ಪರಿಸ್ಥಿತಿ ಬಂದಿದೆ. ಜನರಿಗೆ ಬೇಕಾದಂತಹ ಸರಕಾರ ಆಗಬೇಕು. ವಿದ್ಯುತ್ ದರ ಬಿಜೆಪಿ ಏರಿಕೆ ಮಾಡಿದ್ದು, ನಾವಲ್ಲ ಅಂತಾರೆ. ಅಕ್ಕಿ ಕೇಂದ್ರ ಸರಕಾರ ಕೊಡ್ತಿಲ್ಲ ಅಂತೇಳಿ ಪಲಾಯನ ಮಾಡ್ತಿದ್ದಾರೆ ಎಂದರು.
