ಉದಯವಾಹಿನಿ, ನವದೆಹಲಿ: ಟ್ರಂಪ್‌ ಸುಂಕ ನೀತಿಯಿಂದಾಗಿ ಕೋವಿಡ್‌ ಬಳಿಕ ಅಮೆರಿಕ ಷೇರು ಮಾರುಕಟ್ಟೆ ಅತಿದೊಡ್ಡ ಕುಸಿತ ಕಂಡಿದೆ. ಎಸ್‌‍ ಅಂಡ್‌ ಪಿ 500 ಸೂಚ್ಯಂಕದಲ್ಲಿರುವ ಅತಿದೊಡ್ಡ 500 ಕಂಪನಿಗಳ ಮಾರುಕಟ್ಟೆ ಮೌಲ್ಯ ಒಂದೇ ದಿನದಲ್ಲಿ 2.4 ಟ್ರಿಲಿಯನ್‌ ಡಾಲರ್‌ನಷ್ಟು ಕಡಿಮೆ ಆಗಿದೆ. ಅಂದರೆ ಬರೋಬ್ಬರಿ 200 ಲಕ್ಷ ಕೋಟಿ ರೂಪಾಯಿಯಷ್ಟು ನಷ್ಟವನ್ನು ಹೂಡಿಕೆದಾರರು ಅನುಭವಿಸಿದ್ದಾರೆ.
ಭಾರತದ ಜಿಡಿಪಿಯ ಅರ್ಧಕ್ಕಿಂತ ಹೆಚ್ಚಿನ ಮೊತ್ತದಷ್ಟು ಹಣವು ಒಂದೇ ದಿನದಲ್ಲಿ ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಅಮೆರಿಕ ಷೇರು ಮಾರುಕಟ್ಟೆಯ ಮ್ಯಾಗ್ನಿಫಿಕೆಂಟ್‌ ಸೆವೆನ್‌ ಎಂದು ಪರಿಗಣಿಸಲಾದ ಏಳು ಟೆಕ್ನಾಲಜಿ ಕಂಪನಿಗಳ ಷೇರು ಮೌಲ್ಯ ಒಂದೇ ದಿನದಲ್ಲಿ 600 ಬಿಲಿಯನ್‌ ಡಾಲರ್‌ನಷ್ಟು ಕಡಿಮೆ ಆಗಿದೆ.
ಆ್ಯಪಲ್‌‍, ಮೈಕ್ರೋಸಾಫ್ಟ್ , ಗೂಗಲ್‌‍, ಅಮೇಜಾನ್‌‍, ನಿವಿಡಿಯಾ, ಟೆಸ್ಲಾ ಮತ್ತು ಮೆಟಾ ಈ ಏಳು ಸಂಸ್ಥೆಗಳ ಷೇರುಗಳು ಎಸ್‌‍ ಅಂಡ್‌ ಪಿ 500 ಸೂಚ್ಯಂಕದ ಮಾರುಕಟ್ಟೆ ಮೌಲ್ಯದಲ್ಲಿ ಶೇ. 37ರಷ್ಟು ಪಾಲು ಹೊಂದಿವೆ. ಆ್ಯಪಲ್‌ ಮತ್ತು ನಿವಿಡಿಯಾ ಷೇರುಮೌಲ್ಯ ಗಣನೀಯ ಕುಸಿತ ಕಂಡಿವೆ.
ಡೊನಾಲ್ಡ್ ಟ್ರಂಪ್‌ ಅವರು ಪ್ರತಿಸುಂಕ ಕ್ರಮ ಘೋಷಣೆ ಮಾಡಿದ್ದು ಸಹಜವಾಗಿ ಮಾರುಕಟ್ಟೆಯನ್ನು ಅಲ್ಲೋಲ ಕಲ್ಲೋಲಗೊಳಿಸಿದೆ. ಎಲ್ಲಾ ದೇಶಗಳೂ ಕೂಡ ಅಮೆರಿಕದ ವಿರುದ್ಧ ರಿವೆಂಜ್‌ ಟ್ಯಾಕ್ಸ್ ಹಾಕಿಬಿಟ್ಟರೆ ಟ್ಯಾರಿಫ್‌ ಮಹಾಯುದ್ಧವೇ ಶುರುವಾಗಿಬಿಡಬಹುದು ಎನ್ನುವ ಭೀತಿ ಇದೆ.
ಹೂಡಿಕೆದಾರರಿಗೆ ಇರುವ ಮತ್ತೊಂದು ಭಯ ಎಂದರೆ, ಅಮೆರಿಕದ ದೊಡ್ಡ ಕಂಪನಿಗಳ ಸರಬರಾಜು ಸರಪಳಿಯ ಹೆಚ್ಚಿನ ಭಾಗವು ವಿದೇಶಗಳಲ್ಲಿದೆ. ಆಮದು ಸುಂಕ ಹೆಚ್ಚಾಗಿ ಬಿಟ್ಟರೆ ಸಪ್ಲೈ ಚೈನ್‌ನಿಂದ ಬರುವ ಬಿಡಿಭಾಗಗಳು, ಕಚ್ಛಾ ವಸ್ತುಗಳು ಇತ್ಯಾದಿ ಉತ್ಪನ್ನಗಳ ಬೆಲೆ ಹೆಚ್ಚಳವಾಗುತ್ತದೆ.

Leave a Reply

Your email address will not be published. Required fields are marked *

error: Content is protected !!