ಉದಯವಾಹಿನಿ , ಕೋಲ್ಕತ್ತಾ (ಪಶ್ಚಿಮ ಬಂಗಾಳ): ವಿಧಾನಸಭಾ ಚುನಾವಣೆಗೆ ಸಜ್ಜಾಗಿರುವ ಪಶ್ಚಿಮ ಬಂಗಾಳದಲ್ಲಿ ರಾಜ್ಯ ಚುನಾವಣಾ ಆಯೋಗಕ್ಕೆ ಫಾರ್ಮ್ 7 ಸಲ್ಲಿಸುವ ವಿಚಾರದಲ್ಲಿ ಮತ್ತೆ ಅಶಾಂತಿ ಭುಗಿಲೆದ್ದಿದೆ. ಫಾರ್ಮ್ 7 ಸಲ್ಲಿಕೆ ಗಡುವು ಮುಗಿದಿರುವ ಕಾರಣ ಅನೇಕ ಜಿಲ್ಲೆಗಳಲ್ಲಿ ಪ್ರತಿಭಟನೆಗೆ ಕಾರಣವಾಗಿದ್ದು, ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ತಮ್ಮ ಕಾರ್ಯಕರ್ತರು ಫಾರ್ಮ್‌ಗಳನ್ನು ಸಲ್ಲಿಸದಂತೆ ತಡೆಯುತ್ತಿದೆ ಎಂದು ಭಾರತೀಯ ಜನತಾ ಪಕ್ಷ (ಬಿಜೆಪಿ) ಆರೋಪಿಸಿದೆ.
ಏನಿದು ಫಾರ್ಮ್ 7: ಮತದಾರರ ಪಟ್ಟಿಯಲ್ಲಿ ಮೃತ ಮತದಾರರನ್ನು ವರದಿ ಮಾಡಲು ಮತ್ತು ಮತದಾರರ ಪಟ್ಟಿಯಿಂದ ಅವರನ್ನು ತೆಗೆದುಹಾಕಲು ವಿನಂತಿಸುವ ಫಾರ್ಮ್ 7 ಅನ್ನು ಚುನಾವಣಾ ಆಯೋಗಕ್ಕೆ ಸಲ್ಲಿಕೆ ಮಾಡಬೇಕಿದೆ. ಈ ಫಾರ್ಮ್ ಸಲ್ಲಿಕೆಗೆ ಜನವರಿ 15 ಕೊನೆಯ ದಿನವಾಗಿತ್ತು. ಬಂಕುರಾದ ಛಟ್ನಾ ಬ್ಲಾಕ್‌ನಲ್ಲಿ, ಸ್ಥಳೀಯ ಶಾಸಕ ಸತ್ಯರಾಜನ್ ಮುಖರ್ಜಿ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಫಾರ್ಮ್ 7 ಸಲ್ಲಿಕೆಗಳೊಂದಿಗೆ ಬ್ಲಾಕ್ ಅಭಿವೃದ್ಧಿ ಅಧಿಕಾರಿ (ಬಿಡಿಒ) ಕಚೇರಿಗೆ ಆಗಮಿಸಿದರು. ಈ ವೇಳೆ ಬಿಡಿಒ ಗೈರಾಗಿದ್ದು, ಫಾರ್ಮ್‌ಗಳ ಕುರಿತು ಚರ್ಚಿಸಲು ಅವರನ್ನು ಭೇಟಿಯಾದರುಈ ಭೇಟಿ ವೇಳೆ ಟಿಎಂಸಿ ನೇತೃತ್ವದ ಛತ್ನಾ ಪಂಚಾಯತ್ ಸಮಿತಿ ಅಧ್ಯಕ್ಷ ಬಂಕಿಮ್ ಮಿಶ್ರಾ ಕೂಡ ಬೆಂಬಲಿಗರೊಂದಿಗೆ ಆಮಿಸಿದರು. ಈ ಸಂದರ್ಭದಲ್ಲಿ ಟಿಎಂಸಿ ಸದಸ್ಯರು, ಮಹಿಳೆಯರು ಸೇರಿದಂತೆ ತಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿ, ಫಾರ್ಮ್‌ಗಳನ್ನು ಸಲ್ಲಿಸದಂತೆ ಬಲವಂತವಾಗಿ ತಡೆದಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ಬಿಜೆಪಿ ಜಿಲ್ಲಾಧ್ಯಕ್ಷ ಪ್ರಸೇನ್‌ಜಿತ್ ಚಟರ್ಜಿ ಮಾತನಾಡಿ, ಟಿಎಂಸಿ ಬೆಂಬಲಿಗರು ಪೊಲೀಸ್ ಅಧಿಕಾರಿಗಳ ಮುಂದೆಯೇ ತಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ. ನಮಗೆ ಅವರು ಫಾರ್ಮ್‌ಗಳನ್ನು ಸಲ್ಲಿಸಲು ಅವಕಾಶ ನೀಡಲಿಲ್ಲ. ಈ ಕುರಿತು ಪೊಲೀಸ್ ವರಿಷ್ಠಾಧಿಕಾರಿ ಕ್ರಮ ಕೈಗೊಳ್ಳುವುದಾಗಿ ನಮಗೆ ಭರವಸೆ ನೀಡಿದ್ದಾರೆ ಎಂದರು.
ಜಿಲ್ಲೆಯಲ್ಲಿ ಫಾರ್ಮ್ ಸಲ್ಲಿಕೆ ವೇಳೆ ಈ ರೀತಿ ಹಲವು ಅಡೆತಡೆ ಸಂಭವಿಸಿದೆ. ಮೃತ ಮತದಾರರ ಪಟ್ಟಿಯನ್ನು ಹಾಗೇ ಇರಿಸಿಕೊಳ್ಳಲು ಟಿಎಂಸಿ ಫಾರ್ಮ್ ಸಲ್ಲಿಕೆಗೆ ಅಡ್ಡಿ ಮಾಡುತ್ತಿದೆ. ಇದರಲ್ಲಿ ಬಿಡಿಒ ಅಧಿಕಾರಿಗಳು ಮತ್ತು ಟಿಎಂಸಿ ನಾಯಕರು ಭಾಗಿಯಾಗಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿದ್ದಾರೆ.
ಆದರೆ, ಈ ಹೇಳಿಕೆಯನ್ನು ನಿರಾಕರಿಸರುವ ಬಂಕಿಮ್ ಮಿಶ್ರಾ, ಇದು ಸುಳ್ಳು ಮತ್ತು ಆಧಾರರಹಿತ ಆರೋಪವಾಗಿದೆ. ಬಿಜೆಪಿ ಕಾರ್ಯಕರ್ತರು ಸಾಮಾನ್ಯ ಜನರಿಂದ ಮತದಾನದ ಹಕ್ಕು ಕಸಿಯುವ ಪ್ರಯತ್ನ ನಡೆಸಿದ್ದು, ಇದನ್ನು ಪ್ರಶ್ನಿಸಿ ಪ್ರತಿಭಟನೆ ನಡೆಸಲು ತಾವು ಬಿಡಿಒ ಅಧಿಕಾರಿಗಳ ಬಳಿಗೆ ಹೋಗಿದ್ದಾಗಿ ತಿಳಿಸಿದ್ದಾರೆ.
