ಉದಯವಾಹಿನಿ, ಕಡೂರು: ತಾಲ್ಲೂಕಿನ ಸಿಂಗಟಗೆರೆಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ‘ಎಸ್‌ಡಿಎಂಸಿ’ಗೆ ರಾಜ್ಯ ಸರ್ಕಾರದ ಪುಷ್ಟಿ ಪ್ರಶಸ್ತಿ ಲಭಿಸಿದೆ.
ಶತಮಾನ ಕಂಡ ಶಾಲೆ ಇದಾಗಿದೆ. ಆದರೆ, ಆರೇಳು ವರ್ಷಗಳ ಹಿಂದೆ ಈ ಶಾಲೆ ದುಃಸ್ಥಿತಿಗೆ ತಲುಪಿತ್ತು ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಕುಸಿದಿತ್ತು.
ಆಗ ಶಾಲೆಯ ಹಳೆಯ ವಿದ್ಯಾರ್ಥಿಗಳು, ಎಸ್‌ಡಿಎಂಸಿ ಸದಸ್ಯರು ನಡೆಸಿದ ಚಿಂತನೆಯ ಫಲವಾಗಿ ಈಗ ಶಾಲೆ ಮಾದರಿ ವಿದ್ಯಾದೇಗುಲವಾಗಿ ತಲೆ ಎತ್ತಿ ನಿಂತಿದೆ.
ಶಾಲೆಯಲ್ಲಿ 1 ರಿಂದ 6ನೇ ತರಗತಿವರೆಗೆ ಇಂಗ್ಲಿಷ್ ಮಾಧ್ಯಮ ಮತ್ತು 1 ರಿಂದ 7ರವರೆಗೆ ಕನ್ನಡ ಮಾಧ್ಯಮ ತರಗತಿಗಳಿವೆ. ಎಲ್.ಕೆ.ಜಿ ಮತ್ತು ಯುಕೆ.ಜಿ. ಸೌಲಭ್ಯವೂ ಇಲ್ಲಿದೆ. 13 ಕೊಠಡಿಗಳಿವೆ. 3 ಸ್ಮಾರ್ಟ್ ಕ್ಲಾಸ್‌ಗಳಿವೆ. ವೈ-ಫೈ ಸೌಲಭ್ಯವಿದೆ. ವಿಜ್ಞಾನ ಮಾದರಿಗಳ 90 ಜತೆ ಆಧುನಿಕ ಉಪಕರಣಗಳನ್ನು ಒಳಗೊಂಡ ಸುಸಜ್ಜಿತ ವಿಜ್ಞಾನ ಪ್ರಯೋಗಾಲಯವೂ ಶಾಲೆಯಲ್ಲಿದೆ. ಶಾಲೆಯಲ್ಲಿ 8 ಶಿಕ್ಷಕರಿದ್ದು, 6 ಗೌರವ ಶಿಕ್ಷಕರಿದ್ದಾರೆ. ಒಟ್ಟು 170 ವಿದ್ಯಾರ್ಥಿ ವಿದ್ಯಾರ್ಥಿನಿಯರು ಇಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಪ್ರತಿ ಗುರುವಾರ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಏರ್ಪಡಿಸಿ ಸ್ಪರ್ಧಾಮನೋಭಾವ ಮೂಡಿಸುವ ಕಾರ್ಯ ಮಾಡಲಾಗುತ್ತಿದೆ.
