ಉದಯವಾಹಿನಿ, ಬೆಂಗಳೂರು: ಪೌರ ಕಾರ್ಮಿಕರನ್ನು ಖಾಯಂಗೊಳಿಸುವ ಪ್ರಮಾಣಪತ್ರವನ್ನು ಮೇ 1ರ ಕಾರ್ಮಿಕ ದಿನಾಚರಣೆಯಂದು ವಿತರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.ನಗರದ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದ್ದ ಕರ್ನಾಟಕ ರಾಜ್ಯ ನಗರ ಪಾಲಿಕೆ, ನಗರ ಸಭೆ, ಪುರಸಭೆಗಳ ಪೌರಕಾರ್ಮಿಕರ ಸಮಾವೇಶದಲ್ಲಿ ಮಾತನಾಡಿದ ಅವರು, ಪೌರಕಾರ್ಮಿಕರ ಪೈಕಿ ಈಗಾಗಲೇ ಕೆಲವರನ್ನು ಖಾಯಂಗೊಳಿಸಲಾಗಿದೆ.
ಬಾಕಿ ಉಳಿದವರನ್ನು ಖಾಯಂಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಪೌರಕಾರ್ಮಿಕರಿಗೆ ಖಾಯಮಾತಿ ಪ್ರಮಾಣಪತ್ರವನ್ನು ಕಾರ್ಮಿಕ ದಿನಾಚರಣೆಯಂದೇ ವಿತರಿಸಲಾಗುವುದು ಎಂದರು.
ಈ ಹಿಂದೆ ಪೌರಕಾರ್ಮಿಕರಿಗೆ ಕನಿಷ್ಟ ವೇತನವನ್ನು ಜಾರಿಗೊಳಿಸುವ ಮೂಲಕ 7 ಸಾವಿರ ರೂ.ಗಳಿದ್ದ ವೇತನವನ್ನು 17 ಸಾವಿರ ರೂ.ಗಳಿಗೆ ಹೆಚ್ಚಿಸಲಾಯಿತು. ಅನುಕಂಪದ ಆಧಾರದ ಮೇಲೆ ನೌಕರಿ ನೀಡುವುದನ್ನು ಪರಿಶೀಲಿಸಲಾಗುವುದು. ಖಾಯಂಗೊಂಡಿದ್ದ ಗುತ್ತಿಗೆದಾರರ ಕುಟುಂಬಕ್ಕೆ ಅನುಕಂಪದ ಆಧಾರದ ಸೌಲಭ್ಯ ದೊರೆಯಲಿದೆ ಎಂದು ತಿಳಿಸಿದರು.
ತ್ಯಾಜ್ಯ ಸಾಗಾಣಿಕೆಯ ವಾಹನಗಳ ಚಾಲಕರು, ಸ್ವಚ್ಛಗಾರರನ್ನು ಗುತ್ತಿಗೆ ಬದಲಿಗೆ ನೇರ ವೇತನ ಪಾವತಿಗೆ ಒಳಪಡಿಸಲಾಗುವುದು. ಪೌರಕಾರ್ಮಿಕರಿಗೆ ನಗದುರಹಿತ ಚಿಕಿತ್ಸಾ ಸೌಲಭ್ಯದ ಹೆಲ್ತ್‌ಕಾರ್ಡ್‌ಗಳನ್ನು ವಿತರಿಸುವುದಾಗಿ ಹೇಳಿದರು.
ನಮ ಸರ್ಕಾರ ಸಮ ಸಮಾಜದ ನಿರ್ಮಾಣದ ಮೇಲೆ ನಂಬಿಕೆಯಿಟ್ಟಿದೆ. ಕೆಲಸದ ಆಧಾರದ ಮೇಲೆ ತಾರತಮ್ಯ ಮಾಡುವುದನ್ನು ಬಯಸುವುದಿಲ್ಲ. ನಮಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಯೂ ಒಂದೇ, ಪೌರ ಕಾರ್ಮಿಕರೂ ಒಂದೇ ಎಂದರು.
