ಉದಯವಾಹಿನಿ, ಬೆಂಗಳೂರು: ಬ್ಯಾಂಕ್‌ಗೆ ನಕಲಿ ಚಿನ್ನ ಅಡವಿಟ್ಟು 62 ಕೋಟಿ ಸಾಲ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ(ಇ.ಡಿ.) ಏಕಕಾಲಕ್ಕೆ ಬೆಂಗಳೂರು ಮತ್ತು ಶಿವಮೊಗ್ಗದಲ್ಲಿ ದಾಳಿ ನಡೆಸಿದೆ. ಅಪೆಕ್ಸ್ ಬ್ಯಾಂಕ್ ಮಾಜಿ ಅಧ್ಯಕ್ಷ ಆರ್.ಎಂ.ಮಂಜುನಾಥ್ ಗೌಡ ಅವರು ತಂಗಿದ್ದ ಚಾಮರಾಜಪೇಟೆಯಲ್ಲಿರುವ ಬ್ಯಾಂಕ್‌ನ ಗೆಸ್ಟ್‌ಹೌಸ್‌ನಲ್ಲಿ ದಾಳಿ ನಡೆಸಲಾಗಿದೆ.
ಸುಮಾರು 10ಕ್ಕೂ ಹೆಚ್ಚು ಅಧಿ ಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿ ಕೆಲವು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದು ಪ್ರಕರಣದ ಪ್ರಮುಖ ಆರೋಪಿಯಾಗಿರುವ ಮಂಜುನಾಥ್ ಗೌಡ ಅವರನ್ನು ವಿಚಾರಣೆಗೊಳಪಡಿಸಿದ್ದಾರೆ.ಇನ್ನು ಶಿವಮೊಗ್ಗದ ಡಿಸಿಸಿ ಬ್ಯಾಂಕ್ ಮ್ಯಾನೇಜರ್ ಆಗಿದ್ದ ಶೋಭಾ ಅವರ ಮನೆ ಮತ್ತು ಕಚೇರಿ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ನಗರದ ಗೋಪಾಲಗೌಡ ಬಡಾವಣೆಯಲ್ಲಿರುವ ಶೋಭಾ ಅವರ ನಿವಾಸ ಹಾಗೂ ಕಚೇರಿ ಮೇಲೆ ಬೆಂಗಳೂರಿನಿಂದ ಆಗಮಿಸಿದ್ದ 8ಕ್ಕೂ ಹೆಚ್ಚು ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಹಿಂದೆ ಬ್ಯಾಂಕ್ ಮ್ಯಾನೇಜರ್ ಆಗಿದ್ದ ಶೋಭಾ ಅವರು, 2014ರ ಜೂನ್‌ನಲ್ಲಿ ನಕಲಿ ಚಿನ್ನವಿಟ್ಟು 62 ಕೋಟಿ ಸಾಲ ಪಡೆದು ವಂಚನೆ ಮಾಡಿದ ಆರೋಪವಿದೆ.
ಇದೇ ವೇಳೆ ಬ್ಯಾಂಕ್‌ನ ವಾಹನ ಚಾಲಕ ಶಿವಕುಮಾರ್ ಎಂಬುವರ ಮೇಲೂ ದಾಳಿ ನಡೆಸಲಾಗಿದೆ. ನಗರದ ಕಾಮಾಕ್ಷಿ ಬೀದಿಯಲ್ಲಿರುವ ಶಿವಕುಮಾರ್ ಮನೆ ಮೇಲೆ ದಾಳಿ ನಡೆಸಿ ವಿಚಾರಣೆಗೊಳಪಡಿಸಲಾಗಿದೆ ಎಂದು ತಿಳಿದುಬಂದಿದೆ.ಶಿವಮೊಗ್ಗದ ಗಾಂಧಿಬಜಾರ್ ನಗರದಲ್ಲಿರುವ ಡಿಸಿಸಿ ಬ್ಯಾಂಕ್ ಶಾಖೆಯಲ್ಲಿ 11 ವರ್ಷಗಳ ಹಿಂದೆ ಹಗರಣ ನಡೆದಿತ್ತು. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ತನಿಖೆ ನಡೆಸಿ ಪೊಲೀಸರು 2014ರ ಅ.18ರಂದು ಚಾರ್ಜ್‌ಶೀಟ್ ಸಲ್ಲಿಸಿದ್ದರು. ವಿಚಾರಣಾ ನ್ಯಾಯಾಲಯಕ್ಕೆ ಮೊದಲ ದೋಷಾರೋಪಪಟ್ಟಿ ಸಲ್ಲಿಸಿದ್ದರು.ಈ ಹಿನ್ನೆಲೆಯಲ್ಲಿ ಮಂಜುನಾಥ್ ಗೌಡಗೆ ಇಡಿ ಸಮನ್ಸ್ ಜಾರಿಗೊಳಿಸಿತ್ತು. ಕಳೆದ ವಾರವಷ್ಟೇ ಇ.ಡಿ ಸಮನ್ಸ್ ಪ್ರಶ್ನಿಸಿದ್ದ ಮಂಜುನಾಥ್ ಗೌಡ ಅವರ ಮೇಲನವಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು.ಡಿಸಿಸಿ ಬ್ಯಾಂಕ್ ಗಾಂಧಿ ಬಜಾರ್ ಶಾಖೆಯಲ್ಲಿ 2014ರಲ್ಲಿ ನಡೆದ ಚಿನ್ನ ಅಡಮಾನ ಸಾಲದ ಹಗರಣಕ್ಕೆ ಸಂಬಂಧಿಸಿದಂತೆ ಆರ್.ಎಂ. ಮಂಜುನಾಥಗೌಡ ವಿರುದ್ಧ ನ್ಯಾಯಾಲಯಕ್ಕೆ ಹೆಚ್ಚುವರಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.
