ಉದಯವಾಹಿನಿ, ಕೆಂಗೇರಿ: ಮಹಿಳೆಯರ ಸಬಲೀಕರಣಕ್ಕಾಗಿ ರಾಜ್ಯ ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿದೆ ಎಂದು ಶಾಸಕ ಎಸ್. ಟಿ. ಸೋಮಶೇಖರ್ ತಿಳಿಸಿದರು.
ಯಶವಂತಪುರ ವಿಧಾನಸಭಾ ಕ್ಷೇತ್ರ ರಾಮೋಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಚಲ್ಲಘಟ್ಟದಲ್ಲಿ ತಾವರೆಕೆರೆ ಹೋಬಳಿ ಮಹಿಳಾ ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳೆಯರಿಗೆ ಸೀಮಂತ ಕಾರ್ಯಕ್ರಮ ಹಾಗೂ ವಿವಿಧ ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
ಎಂತಹ ಕಠಿಣ ಸವಾಲುಗಳನ್ನಾದರೂ ಎದುರಿಸಿ ಇಂದು ಗ್ರಾಮ ಪಂಚಾಯಿತಿ ಯಿಂದ ಬಾಹ್ಯಾಕಾಶಯಾನದವರೆಗೆ ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡುವ ಮೂಲಕ ಮಹಿಳೆಯರು ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ ಎಂದು ಬಣ್ಣಿಸಿದರು.

ಮಹಿಳೆಯರನ್ನು ಅಡಿಗೆ ಮನೆಗೆ ಸೀಮಿತಗೊಳಿಸಿದೆ ಉತ್ತಮ ಅವಕಾಶ ಸಹಕಾರ ಪ್ರೋತ್ಸಾಹ ನೀಡುವ ಮೂಲಕ ಅವರ ಪ್ರತಿಭೆ ಅನಾವರಣಗೊಳಿಸಲು ದೃಢ ಸಂಕಲ್ಪ ಮಾಡಬೇಕೆಂದು ಕರೆ ನೀಡಿದರು. ಮಹಿಳೆಯರ ಬಗ್ಗೆ ತಾತ್ಸಾರ ಬೇಡ ಎಲ್ಲ ರೀತಿಯ ಸಹಕಾರ ಪ್ರೋತ್ಸಾಹ ನೀಡುವ ಮೂಲಕ ಮಾನ ವೀಯ ನೆಲೆಯಲ್ಲಿ ಅವರ ಸಬಲೀಕರಣಕ್ಕಾಗಿ ಶ್ರಮಿಸಬೇಕಿದೆ ಎಂದರು.
ತಾವರೆಕೆರೆ ಹೋಬಳಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸಾವಿತ್ರಿ ಸದಾನಂದ ಗೌಡ ಮಾತನಾಡಿ ಮಹಿಳೆಯರ ಪ್ರಗತಿ ಬಗ್ಗೆ ಅಸೂಯೆ,ವಿರೋಧ ವ್ಯಕ್ತಪಡಿಸುವವರು ಇರುತ್ತಾರೆ, ದೊರಕುವ ಅವಕಾಶವನ್ನು ಸದುಯುಪಯೋಗ ಪಡಿಸಿಕೊಂಡು ಉತ್ತಮವಾಗಿ ಕಾರ್ಯ ನಿರ್ವಹಿಸುವ ಮೂಲಕ ಅಂಥವರ ಮಧ್ಯೆ ಎದ್ದು ನಿಲ್ಲುವುದೇ ನಿಜವಾದ ಮಹಿಳಾ ಶಕ್ತಿ ಎಂದರು. ಶಾಸಕ ಎಸ್. ಟಿ. ಸೋಮಶೇಖರ್ ರವರ ಮಾರ್ಗದರ್ಶನ,ಸಹಕಾರ, ಪ್ರೋತ್ಸಾಹದಿಂದ ಉತ್ತಮವಾಗಿ ಕಾರ್ಯನಿರ್ವಹಿಸಲಾಗುತ್ತಿದೆ ಎಂದರು. ರಾಮೋಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ. ಹೆಚ್. ಪ್ರಭು, ತಾವರೆಕೆರೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೆಂಪೇಗೌಡ, ಗ್ರಾಮ ಪಂಚಾಯತಿ ಸದಸ್ಯರಾದ ಮಂಜುನಾಥ್, ಉಮೇಶ್, ಶಾಂತಾ ಸುರೇಶ್, ತಾವರೆಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರೇವಣಸಿದ್ದಯ್ಯ, ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಗೌಡ, ವಿವಿಧ ಮಹಿಳಾ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!