ಉದಯವಾಹಿನಿ, ಕೋಲ್ಕತ್ತಾ : ವಕ್ಫ್ (ತಿದ್ದುಪಡಿ) ಕಾಯ್ದೆಯ ವಿರುದ್ಧ ನಡೆದ ಪ್ರತಿಭಟನೆಯರ ವೇಳೆ ಮುಸ್ಲಿಂ ಪ್ರಾಬಲ್ಯದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಪೊಲೀಸರು 110ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ.
ಮುರ್ಷಿದಾಬಾದ್ ಜಿಲ್ಲೆಯಲ್ಲಿ ವಕ್ಫ್ (ತಿದ್ದುಪಡಿ) ಕಾಯಿದೆ ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆ ಇಂದು ಕೂಡ ಮುಂದುವರೆದಿದೆ. ಪ್ರತಿಭಟನಾಕಾರರು ಪೊಲೀಸ್ ವಾಹನಗಳು ಮತ್ತು ಬಳಿಗೆ ಬೆಂಕಿ ಹಚ್ಚಿದ್ದಾರೆ. ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಸುಟಿ ಮತ್ತು ಸಂಸರ್ಗಂಜನ್ನಲ್ಲಿ ಹೆದ್ದಾರಿತಡೆದು ವಾಹನ ಸಂಚಾರಕ್ಕೆ ಅಡ್ಡಿಪಡಿಸಿದ್ದಾರೆ. ಅಷ್ಟೇ ಅಲ್ಲದೆ ರೈಲ್ವೆ ಹಳಿಗಳನ್ನು ತಡೆದು ರೈಲುಗಳನ್ನು ಗುರಿಯಾಗಿಸಿಕೊಂಡು ಕಲ್ಲು ತೂರಾಟ ನಡೆಸಿದ್ದಾರೆ. ಇದರೆ ಬೆನ್ನಲ್ಲೇ ಭಾರತೀಯ ರೈಲ್ವೆ ಎರಡು ರೈಲು ಸಂಚಾರವನ್ನು ರದ್ದುಗೊಳಿಸಿದೆ ಎಂದು ವರದಿಯಾಗಿದೆ.
ಪ್ರತಿಭಟನಾಕಾರರು ತೃಣಮೂಲ ಕಾಂಗ್ರೆಸ್ ಸ್ಥಳೀಯ ಕಚೇರಿಯನ್ನು ಧ್ವಂಸಗೊಳಿಸಿದ್ದಾರೆ. ಇದರಿಂದಾಗಿ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಪ್ರತಿಭಟನಾಕಾರರ ಮೇಲೆ ಅಶ್ರುವಾಯು ಸಿಡಿಸಿ ಲಾಠಿ ಪ್ರಹಾರ ನಡೆಸಿದ್ದಾರೆ.ಜಂಗಿಪುರದ ಸುತಿ ಮತ್ತು ಸಂಸರ್ಗಂಚ್ ಪ್ರದೇಶಗಳಲ್ಲಿ ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಸಹಜ ಸ್ಥಿತಿಗೆ ಮರಳಿದೆ. ಸ್ಥಳದಲ್ಲಿ ಹೆಚ್ಚುವರಿಅರೆಸೇನಾ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಪಶ್ಚಿಮ ಬಂಗಾಳ ಪೊಲೀಸರು ಮಾಹಿತಿ ನೀಡಿದ್ದಾರೆ.ಹಿಂಸಾಚಾರ ಪೀಡಿತ ಪ್ರದೇಶಗಳಲ್ಲಿ ಇಂದು ಕೂಡ ಪರಿಸ್ಥಿತಿ ಉದ್ವಿಗ್ನವಾಗಿತ್ತು. ಹಿಂಸಾಚಾರ ನಡೆದ ಅತ್ಯಂತ ಹೆಚ್ಚು ಹಾನಿಗೊಳಗಾದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ನಿಷೇಧಾಜ್ಞೆಗಳನ್ನು ವಿಧಿಸಲಾಗಿದೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಪ್ರತಿಭಟನೆಯ ಕಾವು ಮಾಲ್ಟಾ, ಮುರ್ಷಿದಾಬಾದ್, ದಕ್ಷಿಣ 24 ಪರಗಣಗಳು ಮತ್ತು ಹೂಗ್ಲಿ ಜಿಲ್ಲೆಗಳಲ್ಲಿ ವ್ಯಾಪಿಸಿತ್ತು. ಈ ಎಲ್ಲಾ ಜಿಲ್ಲೆಗಳಲ್ಲಿ ಕಾರ್ಯಾಚರಣೆ ಕೈಗೊಂಡಿದ್ದು, ಮುರ್ಷಿದಾಬಾದ್ ಒಂದರಲ್ಲೇ 110 ಮಂದಿಯನ್ನು ಬಂಧಿಸಲಾಗಿದೆ. ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸುಮಾರು 70 ಜನರನ್ನು ಸುಟಿಯಿಂದ ಮತ್ತು 41 ಜನರನ್ನು ಸಂಸರ್ ಗಂಜ್ನಿಂದ ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
