ಉದಯವಾಹಿನಿ, ಬೆಂಗಳೂರು: ಬೀದರ್‌ನಲ್ಲಿ ವರದಿ ಮಾಡಲು ಹೋಗಿದ್ದ ಪತ್ರಕರ್ತ ರವಿ ಬಸವರಾಜ ಬೋಸುಂಡೆ ಅವರ ಮೇಲೆ ಹಲ್ಲೆ ಮಾಡಿದ್ದ ಅರಣ್ಯ ಇಲಾಖೆ ಸಿಬ್ಬಂದಿ ದಸ್ತಗಿರಿ ಸಾಬ ಅವರನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ದಸ್ತಗಿರಿಸಾಬ ಅವರು ಕರ್ತವ್ಯ ನಿರ್ವಹಿಸುವಾಗ ಸಾರ್ವಜನಿಕರೊಂದಿಗೆ ಸೌಜನ್ಯಯುತವಾದ ಸ್ಪಂದನಾಶೀಲ ವರ್ತನೆಯನ್ನು ತೋರಿಸದೇ ಇರುವುದು ಹಾಗೂ ಸೌಜನ್ಯದಿಂದ ವರ್ತಿಸದೇ ಇರುವುದು ಮೇಲ್ನೋಟಕ್ಕೆ ಕಂಡುಬಂದ ಹಿನ್ನೆಲೆಯಲ್ಲಿ ಅಶಿಸ್ತು ಎಂದು ಪರಿಗಣಿಸಿ ಅಮಾನತುಗೊಳಿಸಲಾಗಿದೆ.
ಘಟನೆಯ ಬಗ್ಗೆ ತನಿಖೆಯಾಗಿ ಸತ್ಯಾಸತ್ಯತೆ ತಿಳಿಯುವ ಉದ್ದೇಶದಿಂದ ಹಾಗೂ ನಿಷ್ಪಕ್ಷಪಾತ ತನಿಖೆಗೆ ಅಡ್ಡಿಯಾಗದಂತೆ ಅಮಾನತು ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಬೀದರ್ ನಗರದಲ್ಲಿ ಏ.15ರ ರಾತ್ರಿ ಪತ್ರಕರ್ತರೊಬ್ಬರ ಮೇಲೆ ಅರಣ್ಯ ಸಿಬ್ಬಂದಿ ಹಲ್ಲೆ ಮಾಡಿದ್ದ ಬಗ್ಗೆ ಶಿಸ್ತುಕ್ರಮ ಜರುಗಿಸಿ ವರದಿ ನೀಡಲು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಸೂಚನೆ ನೀಡಿದ್ದರು.
ಪತ್ರಕರ್ತನ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜಿ ) ಈ ಬಗ್ಗೆ ತಪ್ಪಿತಸ್ಥರ ಮೇಲೆ ಕ್ರಮಕ್ಕೆ ಆಗ್ರಹಿಸಿತ್ತು. ಬೀದರ್ ನಲ್ಲಿ ಸಂಘಟನೆ ಪ್ರತಿಭಟನೆಯನ್ನೂ ನಡೆಸಿತ್ತು. ಸಚಿವರ ಸೂಚನೆ ಮೇರೆಗೆ ಅಮಾನತು ಮಾಡಿದ ಕ್ರಮವನ್ನು ಸ್ವಾಗತಿಸಿರುವ ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು, ಇದು ಪತ್ರಕರ್ತರ ಸಾಂಘಿಕ ಹೋರಾಟಕ್ಕೆ ಸಿಕ್ಕ ಮನ್ನಣೆ ಎಂದು ಪ್ರತಿಕ್ರಿಯಿಸಿದ್ದಾರೆ. ತಪ್ಪು ಮಾಡಿದ ಹಲ್ಲೆಕೋರರಿಗೆ ಮುಂದುವರಿದ ಕ್ರಮ ಆಗಬೇಕೆಂದು ಆಗ್ರಹಿಸಿದ್ದಾರೆ.
