ಉದಯವಾಹಿನಿ, ಹಿರಿಯೂರು: ಇಂದಿಗೂ ಕಂದಾಯ ಇಲಾಖೆ ದಾಖಲೆಗಳಲ್ಲಿ ಗಂಜಿಗಟ್ಟಿ’ ಎಂದೇ ದಾಖಲಾಗಿರುವ ತಾಲ್ಲೂಕಿನ ಗಾಂಧಿನಗರ ಗ್ರಾಮದ ಜನ ಶಿವರಾತ್ರಿ ಹಬ್ಬದಿಂದಲೂ ನೀರಿಗಾಗಿ ಪರದಾಡುತ್ತಿದ್ದಾರೆ. ಅಂದಾಜು 200 ಮನೆಗಳನ್ನು ಹೊಂದಿರುವ ಗಂಜಿಗಟ್ಟೆ ಗ್ರಾಮದ ಜನಸಂಖ್ಯೆ 1,000ದಷ್ಟಿದೆ.
ಗ್ರಾಮಕ್ಕೆ ಕುಡಿಯುವ ನೀರು ಪೂರೈಕೆಗೆಂದು 8ರಿಂದ 10 ಕೊಳವೆಬಾವಿ ಕೊರೆಯಿಸಿದ್ದು, ಪ್ರಸ್ತುತ 7 ಕೊಳವೆಬಾವಿಗಳಲ್ಲಿ ಮಾತ್ರ ಸ್ವಲ್ಪ ಹೊತ್ತು ನೀರು ಬರುತ್ತದೆ.
‘50,000 ಲೀಟರ್ ಸಂಗ್ರಹ ಸಾಮರ್ಥ್ಯದ ಓವರ್ ಹೆಡ್ ಟ್ಯಾಂಕ್ ತುಂಬುವುದೇ ಅಪರೂಪ ಎಂಬಂತಾಗಿದೆ. ಊರಿನ ಎರಡು
ಭಾಗದಲ್ಲಿರುವ ಮನೆಗಳಿಗೆ ದಿನ ಬಿಟ್ಟು ದಿನ ನೀರು ಬಿಡಲಾಗುತ್ತದೆ.
ಗ್ರಾಮ ಪಂಚಾಯಿತಿಯಿಂದ ಬಿಡುವ ನೀರು ಹಸಿದ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ.
ಶುದ್ಧ ಕುಡಿಯುವ ನೀರು ಪೂರೈಕೆಗೆಂದು ಸ್ಥಾಪಿಸಿದ ಘಟಕ ಕೆಟ್ಟು ಹೋಗಿ ಗ್ರಾಮಸ್ಥರು ಬಟ್ಟೆ ಒಣಗಿಸುವ ತಾಣವನ್ನಾಗಿ ಮಾಡಿಕೊಂಡಿದ್ದರ
ಬಗ್ಗೆ, ವರ್ಷದ ಹಿಂದೆ ‘ಪ್ರಜಾವಾಣಿ’ ವರದಿ ಮಾಡಿತ್ತು. ನಂತರ ಎಚ್ಚೆತ್ತ ತಾಲ್ಲೂಕು ಆಡಳಿತ ಹೊಸ ಘಟಕ ಸ್ಥಾಪನೆ ಮಾಡಿದ್ದು, ಇನ್ನೂ ಉದ್ಘಾಟನೆ ಭಾಗ್ಯ ಕಂಡಿಲ್ಲ. ಇದರಿಂದಾಗಿ ಗ್ರಾಮದ ಜನ ಗ್ರಾಮ
ಪಂಚಾಯಿತಿ ಮುಖ್ಯ ಕೇಂದ್ರವಾಗಿರುವ ಗೌಡನಹಳ್ಳಿಗೆ ಕ್ಯಾನ್‌ಗಳೊಂದಿಗೆ ನೀರು ತರಲು ಹೋಗುತ್ತಿದ್ದರು. ಅಲ್ಲಿನವರು ತಮಗೆ ನೀರಿನ ಕೊರತೆಯಾಗುತ್ತದೆ ಎಂದು ವಿರೋಧ ವ್ಯಕ್ತಪಡಿಸಿದ್ದರಿಂದ ಬೈಕ್, ಆಟೊಗಳು ಇರುವವರು ಸೋಮೇರಹಳ್ಳಿ, ಹುಲುಗಲಕುಂಟೆ ಗ್ರಾಮಗಳಿಂದ ಕುಡಿಯುವ ನೀರು ತರುತ್ತಿದ್ದಾರೆ.
