ಉದಯವಾಹಿನಿ, ಬೆಂಗಳೂರು: ಇತ್ತೀಚಿಗೆ ಮುಕ್ತಾಯಗೊಂಡ ಬಜೆಟ್‌ ಅಧಿವೇಶನದ ಕೊನೆಯ ದಿನದಂದು ಕಲಾಪದ ವೇಳೆ ಅನುಚಿತವಾಗಿ ವರ್ತನೆ ತೋರಿದ ಆರೋಪದ ಮೇಲೆ ವಿಧಾನಸಭೆಯಿಂದ ಆರು ತಿಂಗಳ ಕಾಲ ಶಾಸಕರನ್ನು ಅಮಾನತುಪಡಿಸಿರುವ ಆದೇಶವನ್ನು ವಿಧಾನಸಭಾಧ್ಯಕ್ಷರು ಹಿಂಪಡೆಯದಿದ್ದರೆ, ನ್ಯಾಯಾಲಯದ ಮೊರೆ ಹೋಗಲು ಬಿಜೆಪಿ ಪಕ್ಷ ತೀರ್ಮಾನಿಸಿದೆ.
ಈ ಹಿಂದೆ ಮಹಾರಾಷ್ಟ್ರ ವಿಧಾನಸಭೆಯಲ್ಲಿ 12 ಶಾಸಕರ ಅಮಾನತು ರದ್ದುಗೊಳಿಸಿ ಅಲ್ಲಿನ ವಿಧಾನಸಭಾಧ್ಯಕ್ಷರು ಆದೇಶ ಹೊರಡಿಸಿದ್ದರು. ಇದನ್ನು ಪ್ರಶ್ನಿಸಿ ಬಿಜೆಪಿ ನ್ಯಾಯಾಲಯದ ಮೊರೆ ಹೋಗಿತ್ತು. ಎರಡು ಕಡೆ ವಾದ- ವಿವಾದ ಆಲಿಸಿದ್ದ ಬಾಂಬೆ ಹೈಕೋರ್ಟ್‌ 2021 ರ ತೀರ್ಪನ್ನು ಉಲ್ಲೇಖಿಸಿ ಅಮಾನತು ಆದೇಶವನ್ನು ರದ್ದುಪಡಿಸಿತ್ತು. ಇದೀಗ ರಾಜ್ಯದ ಬಿಜೆಪಿ ಶಾಸಕರು ಇದೇ ನ್ಯಾಯಾಂಗ ಮಾರ್ಗವನ್ನು ಹುಡುಕುತ್ತಿದ್ದಾರೆ. ಆದರೂ ಅವರು ಕೊನೆಯ ಕ್ಷಣದವರೆಗೆ ಸದನದೊಳಗೆ ಸಮಸ್ಯೆಯನ್ನು ಪರಿಹರಿಸುವ ಆಶಯ ಹೊಂದಿದ್ದಾರೆ.
ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ ನೇತೃತ್ವದ ಬಿಜೆಪಿ ನಿಯೋಗವು ಅಮಾನತು ರದ್ದತಿಗೆ ಮನವಿ ಸಲ್ಲಿಸಲು ಶುಕ್ರವಾರ ಸಭಾಧ್ಯಕ್ಷರನ್ನು ಭೇಟಿ ಮಾಡಬೇಕಿತ್ತು. ಆದಾಗ್ಯೂ, ಗುಡ್‌ ಫ್ರೈಡೇ ರಜೆಯ ಕಾರಣ ಸಭೆಯನ್ನು ಸೋಮವಾರಕ್ಕೆ ಮುಂದೂಡಲಾಗಿದೆ. ಸೋಮವಾರ ನಡೆಯಲಿರುವ ಸಭೆಯ ತೀರ್ಮಾನದ ಬಳಿಕ ಬಿಜೆಪಿ ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳಲಿದೆ.

 

Leave a Reply

Your email address will not be published. Required fields are marked *

error: Content is protected !!