ಉದಯವಾಹಿನಿ, ಮುಳಬಾಗಿಲು: ಜಾತಿಗಣತಿಗೆ ಸಂಬಂಧಿಸಿದಂತೆ ಇದೇ ಮೇ.೫ ರಿಂದ ೧೫ರವರೆಗೂ ಮನೆಮನೆಗೂ ಸಮೀಕ್ಷೆ ನಡೆಯಲಿದ್ದು ಮಾದಿಗ ಸಮುದಾಯ ಮಾದಿಗ ಎಂದು ನಮೂದಿಸಬೇಕೆಂದು ಮಾದಿಗ ದಂಡೋರ ರಾಜ್ಯ ಉಪಾಧ್ಯಕ್ಷ ಸಾಹುಕಾರ ಶಂಕರಪ್ಪ ಕರೆ ನೀಡಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸಮುದಾಯದ ಮುಖಂಡರ ಸಭೆಯಲ್ಲಿ ಮಾತನಾಡಿ, ಮಾದಿಗ ಸಮುದಾಯದವರು ಮಾದಿಗ ಎಂದು ಹೊಲೆಯ ಸಮುದಾಯದವರು ಹೊಲೆಯ ಎಂದು ಜಾತಿ ಸಮೀಕ್ಷೆಯಲ್ಲಿ ಕಡ್ಡಾಯವಾಗಿ ನಮೂದಿಸಬೇಕೆಂದು ಮನವಿ ಮಾಡಿದರು.
ಕೇಂದ್ರ-ರಾಜ್ಯ ಸರ್ಕಾರಗಳ ಸವಲತ್ತುಗಳನ್ನು ಪಡೆಯಲು ಮತ್ತು ಶಿಕ್ಷಣ ಕ್ಷೇತ್ರ ರಾಜಕೀಯ ಕ್ಷೇತ್ರ ಇತರೆ ಕ್ಷೇತ್ರಗಳಲ್ಲಿ ಮೀಸಲಾತಿ ಅಡಿಯಲ್ಲಿ ಅನುಕೂಲ ಜಾತಿ ಗಣತಿ ಅನುಕೂಲವಾಗಿದೆ ಎಂದು ಅಭಿಪ್ರಾಯಪಟ್ಟರು.
ಮಾದಿಗ ದಂಡೋರ ರಾಜ್ಯ ಕಾನೂನು ಸಲಹೆಗಾರ ಹಾರೋಹಳ್ಳಿ ವೆಂಕಟೇಶ್ ಮಾತನಾಡಿ, ಮಾದಿಗ ಸಮುದಾಯ ಶೈಕ್ಷಣಿಕ ರಾಜಕೀಯ ಆರ್ಥಿಕವಾಗಿ ಹಿಂದುಳಿದಿದ್ದು, ಈ ಬಾರಿ ರಾಜ್ಯ ಸರ್ಕಾರದಿಂದ ನಡೆಯುತ್ತಿರುವ ಜಾತಿಗಣತಿ ಸಮಯದಲ್ಲಿ ಮಾದಿಗ ಸಮುದಾಯ ಎಂದು ಕಡ್ಡಾಯವಾಗಿ ನಮೂದಿಸಬೇಕೆಂದು ಮನವಿ ಮಾಡಿದರಲ್ಲದೆ ಸಮುದಾಯದ ಮುಖಂಡರು ಗ್ರಾಮೀಣ-ನಗರ ಪ್ರದೇಶದಲ್ಲಿ ಸಮುದಾಯದ ಮನೆ ಮನೆಗೂ ತೆರಳಿ ಜಾಗೃತಿ ಮೂಡಿಸಬೇಕೆಂದು ಕರೆ ನೀಡಿದರು.
