ಉದಯವಾಹಿನಿ, ಬೆಂಗಳೂರು: ಕೃಷ್ಣಾ ಜಲವಿವಾದ ನ್ಯಾಯಮಂಡಳಿಯ ಅಂತಿಮ ತೀರ್ಪಿನ ಅನುಷ್ಠಾನ ಕುರಿತು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲು ಸದ್ಯದಲ್ಲಿಯೇ ಸರ್ವಪಕ್ಷ ಸಭೆ ಕರೆಯಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಕೃಷ್ಣಾ ನ್ಯಾಯಾಧಿಕರಣ-2 ಗೆಜೆಟ್ ಅಧಿಸೂಚನೆ ಕುರಿತು ಚರ್ಚಿಸಲು ಕೇಂದ್ರ ಜಲಶಕ್ತಿ ಸಚಿವರು ಕರೆದಿರುವ ಕಣಿವೆ ರಾಜ್ಯಗಳ ಜಲಸಂಪನೂಲ ಸಚಿವರ ಸಭೆಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿಂದು ಸಚಿವರು ಹಾಗೂ ಹಿರಿಯ ಅಧಿಕಾರಿಗಳ ಸಭೆ ನಡೆಯಿತು.
ರಾಜ್ಯದ ರೈತರ ಹಿತಾಸಕ್ತಿ ಕಾಪಾಡಲು ಸರ್ಕಾರ ಬದ್ಧವಾಗಿದ್ದು, ರಾಜ್ಯದ ಪಾಲಿನ ನೀರನ್ನು ಪಡೆದುಕೊಳ್ಳಲು ಕಾನೂನು ಕ್ರಮಗಳು ಸೇರಿದಂತೆ ಎಲ್ಲಾ ಪ್ರಯತ್ನ ನಡೆಸುವಂತೆ ಮುಖ್ಯಮಂತ್ರಿ ಇದೇ ವೇಳೆ ಸೂಚನೆ ನೀಡಿದರು.
ಕೃಷ್ಣಾ ಜಲವಿವಾದ ನ್ಯಾಯಮಂಡಳಿಯ ಅಂತಿಮ ತೀರ್ಪಿನ ಗೆಜೆಟ್ ಅಧಿಸೂಚನೆ ಪ್ರಕಟಿಸಲು ಮತ್ತು ಈ ಕುರಿತಾಗಿ 2021 ಸೆಪ್ಟೆಂಬರ್ 16ರ ಸುಪ್ರೀಂಕೋರ್ಟ್ ಆದೇಶವನ್ನು ಮಾರ್ಪಡಿಸಲು ಕೋರಿ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಲು ಕೇಂದ್ರ ಸರ್ಕಾರಕ್ಕೆ ಒತ್ತಡ ಹೇರಲು ನಿರ್ಧರಿಸಲಾಯಿತು. ನ್ಯಾಯಾಧಿಕರಣದ ಅಂತಿಮ ತೀರ್ಪು ಕೇಂದ್ರ ಸರ್ಕಾರದ ಗೆಜೆಟ್ ಅಧಿಸೂಚನೆಗೆ ಒಳಪಟ್ಟಿದ್ದು, ಈ ಕುರಿತಾಗಿ ಹಲವು ಬಾರಿ ಮನವಿ ಸಲ್ಲಿಸಿದ್ದರೂ, ಇನ್ನೂ ಅಧಿಸೂಚನೆ ಆಗಿಲ್ಲ. ಯಾಧಿಕರಣದ ಅಂತಿಮ ತೀರ್ಪು ನೀಡಿದ ದಿನಾಂಕದಿಂದ ಇದುವರೆಗೂ 15 ವರ್ಷಗಳೇ ಕಳೆದಿವೆ. ಉತ್ತರ ಕರ್ನಾಟಕದ ಯುಕೆಪಿ-3 ಯೋಜನೆಯ ಪ್ರದೇಶದಲ್ಲಿನ ರೈತರು ತಮ್ಮ ಹಕ್ಕಿನ ಪಾಲನ್ನು ಬಳಸಲು ಬಹಳ ವರ್ಷಗಳಿಂದ ಕಾಯುತ್ತಿದ್ದಾರೆ ಎಂದು ಮುಖ್ಯಮಂತ್ರಿ ಅವರು ಹೇಳಿದರು.
