ಉದಯವಾಹಿನಿ, ಬೆಂಗಳೂರು: ರಾಜ್ಯದ ಕಾಂಗ್ರೆಸ್ ನಾಯಕರು ತಮ್ಮ ಟ್ವೀಟ್ ಸಂಬಂಧ ದೇಶದ ಜನರ ಕ್ಷಮೆ ಯಾಚಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆಗ್ರಹಿಸಿದ್ದಾರೆ. ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಅವರು, ಕರ್ನಾಟಕ ಕಾಂಗ್ರೆಸ್ಸಿನವರು ಮನುಕುಲದ ಅತ್ಯಂತ ಶಕ್ತಿಯುತ ಶಸ್ತ್ರ ಶಾಂತಿ ಎಂದು ಇವತ್ತು ಟ್ವೀಟ್ ಮಾಡಿದ್ದಾರೆ. ಇವರಿಗೆ ನಾಚಿಕೆ ಆಗಬೇಕಾಗಿತ್ತು. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮತ್ತು ರಾಹುಲ್ ಗಾಂಧಿಯವರು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು. ಇಂಥ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಇಂಥ ಹೇಳಿಕೆ ನೀಡಿದ್ದು, ಶೋಭೆ ತರತಕ್ಕಂಥದ್ದಲ್ಲ ಎಂದು ಆಕ್ಷೇಪಿಸಿದರು.ರಾಜ್ಯ ಕಾಂಗ್ರೆಸ್ ನಾಯಕರು ಯಾವ ರೀತಿ ಟ್ವೀಟ್ ಮಾಡಿದ್ದಾರೋ ಇದಕ್ಕೆ ಸ್ಪಷ್ಟನೆ ನೀಡಬೇಕು. ಕಾಂಗ್ರೆಸ್ಸಿನವರು ಉಗ್ರರ ಪರವಾಗಿ ಇದ್ದಾರಾ? ಭಾರತದ ಪರವಾಗಿ ಇದ್ದಾರಾ…? ಅಥವಾ ಪಾಕಿಸ್ತಾನದ ಪರವಾಗಿದ್ದಾರೋ ಎಂಬುದನ್ನು ಸ್ಪಷ್ಟಪಡಿಸಬೇಕಿದೆ ಎಂದು ಆಗ್ರಹಿಸಿದರು.ಜನಾಕೋಶ ಯಾತ್ರೆ ತಾತ್ಕಾಲಿಕ ಮುಂದೂಡಿಕೆ :ಬಿಜೆಪಿ ಕೊನೆಯ ಹಂತದ ಜನಾಕೋಶ ಯಾತ್ರೆಯನ್ನು ಇಂದಿನಿಂದ ಪ್ರಾರಂಭಿಸಿದೆ. ಇವತ್ತು ಕೋಲಾರ, ನಾಳೆ ತುಮಕೂರು, ಚಿತ್ರದುರ್ಗ- ಈ ರೀತಿ ಪ್ರವಾಸ ಘೋಷಿಸ್ದೆಿವು. ಭಾರತ-ಪಾಕಿಸ್ತಾನದ ನಡುವೆ ಒಂದು ರೀತಿ ಯುದ್ಧ ಪ್ರಾರಂಭವಾದ ಇಂಥ ಸಂದರ್ಭದಲ್ಲಿ ಪ್ರತಿಯೊಬ್ಬ ಭಾರತೀಯರೂ ಒಂದಾಗಿ ಇರಬೇಕು ಎಂದು ತಿಳಿಸಿದರು. ರಾಜಕೀಯ ಪಕ್ಷಗಳೂ ಒಟ್ಟಾಗಿ, ಒಂದಾಗಿ ದೇಶದ ಜೊತೆ ನಿಲ್ಲಬೇಕು ಎಂದು ಬಿ.ವೈ.ವಿಜಯೇಂದ್ರ ಅವರು ಮನವಿ ಮಾಡಿದರು.ಈ ಸದುದ್ದೇಶ ಇಟ್ಟುಕೊಂಡಿದ್ದೇವೆ. ನಿಗದಿಯಂತೆ ಕೋಲಾರದಲ್ಲಿ ಇವತ್ತು ಜನಾಕೋಶ ಯಾತ್ರೆ ನಡೆಯಲಿದೆ. ನಾಳೆಯಿಂದ ನಡೆಯಬೇಕಿದ್ದ ಕಾರ್ಯಕ್ರಮಗಳನ್ನು ತಾತ್ಕಾಲಿಕವಾಗಿ ಮುಂದೂಡುತ್ತಿದ್ದೇವೆ ಎಂದು ಪ್ರಕಟಿಸಿದರು. ವಿಶೇಷ ಪೂಜೆ ಸಲ್ಲಿಸಿ ನೈತಿಕ ಸ್ಥೈರ್ಯ ತುಂಬಲು ಮನವಿ :ಪ್ರತಿಯೊಬ್ಬ ಭಾರತೀಯರೂ ನಮ ಸೈನಿಕರಿಗೆ ಬೆಂಬಲ ನೀಡಬೇಕು. ಬಿಜೆಪಿ ಕಾರ್ಯಕರ್ತರು ಮತ್ತು ರಾಜ್ಯದ ಜನತೆ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನೆರವೇರಿಸಬೇಕು ಎಂದು ಮನವಿ ಮಾಡಿದರು. ಯೋಧರಿಗೆ ನೈತಿಕ ಸ್ಥೈರ್ಯ ತುಂಬಬೇಕೆಂದು ವಿನಂತಿಸಿದರು.ಉಗ್ರಗಾಮಿಗಳ ಅಟ್ಟಹಾಸಕ್ಕೆ 26 ಭಾರತೀಯರು ತಮ ಪ್ರಾಣ ಕಳಕೊಂಡಿದ್ದರು. ನಂತರ ಇಡೀ ದೇಶದಲ್ಲಿ ಆಕೋಶ ವ್ಯಕ್ತವಾಗಿತ್ತು. ಪ್ರತೀಕಾರ ತೆಗೆದುಕೊಳ್ಳಬೇಕೆಂದು ಹಾಗೂ ಪಾಕಿಸ್ತಾನ, ಪಾಕ್ ಉಗ್ರರಿಗೆ ಬುದ್ಧಿ ಕಲಿಸಬೇಕೆಂದು ಪ್ರತಿಯೊಬ್ಬ ಭಾರತೀಯರೂ ಅಪೇಕ್ಷಿಸಿದ್ದರು. ಉಗ್ರರಿಗೆ ತಕ್ಕ ಶಾಸ್ತಿ ಮಾಡುವ ನಿಟ್ಟಿನಲ್ಲಿ ಪ್ರಧಾನಿ ಮೋದಿಯವರು ಅದಕ್ಕೆ ಪೂರಕವಾಗಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದರು.
