ಉದಯವಾಹಿನಿ, ಕೂಚ್ ಬೆಹಾರ್: ಪಶ್ಚಿಮ ಬಂಗಾಳದ ಕೂಚ್ ಬೆಹಾರ್ ಜಿಲ್ಲೆಯಲ್ಲಿ ಕೇಂದ್ರ ಸಚಿವ ನಿಸಿತ್ ಪ್ರಮಾಣಿಕ್ ಅವರ ಬೆಂಗಾವಲು ವಾಹನದ ಮೇಲೆ ತೃಣಮೂಲ ಕಾಂಗ್ರೆಸ್ ಬೆಂಬಲಿಗರು ಶನಿವಾರ ದಾಳಿ ನಡೆಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಆದರೆ ಆಡಳಿತ ಪಕ್ಷ ಆರೋಪವನ್ನು ತಳ್ಳಿಹಾಕಿದೆ. ಸಾಹಿಬ್‌ಗಂಜ್ ಪ್ರದೇಶದಲ್ಲಿ ಮುಂಬರುವ ಪಂಚಾಯತ್ ಚುನಾವಣೆಗೆ ನಾಮಪತ್ರಗಳ ಪರಿಶೀಲನೆ ನಡೆಯುತ್ತಿರುವ ಬ್ಲಾಕ್ ಡೆವಲಪ್‌ಮೆಂಟ್ ಕಛೇರಿಗೆ ಪ್ರಾಮಾಣಿಕ್ ಅವರು ಭೇಟಿ ನೀಡಲು ಯತ್ನಿಸಿದಾಗ ಈ ಘಟನೆ ನಡೆದಿದೆ. ಟಿಎಂಸಿ ಕಾರ್ಯಕರ್ತರು ಬಿಡಿಒ ಕಚೇರಿಗೆ ತೆರಳುವ ರಸ್ತೆ ತಡೆದು ಅಕ್ರಮ ನಡೆಸುತ್ತಿದ್ದಾರೆ ಎಂಬ ವರದಿಯ ಹಿನ್ನೆಲೆಯಲ್ಲಿ ನಾನು ಅಲ್ಲಿಗೆ ಹೋಗಿದ್ದೆ ಎಂದು ಸಚಿವರು ಹೇಳಿದ್ದಾರೆ. “ನಾನು ಬಿಡಿಒ ಕಚೇರಿಗೆ ಭೇಟಿ ನೀಡಲು ಪ್ರಯತ್ನಿಸಿದಾಗ, ನನ್ನ ಬೆಂಗಾವಲು ವಾಹನದ ಮೇಲೆ ಕಲ್ಲು ತೂರಲಾಯಿತು. ಅಲ್ಲದೆ ನಮ್ಮ ಮೇಲೆ ಬಾಂಬ್‌ಗಳನ್ನು ಸಹ ಎಸೆಯಲಾಯಿತು. ಟಿಎಂಸಿ ಕಾರ್ಯಕರ್ತರು ನಮ್ಮ ಪಕ್ಷದ ಕಾರ್ಯಕರ್ತರನ್ನು ಥಳಿಸಿದರು ಮತ್ತು ನಮ್ಮ ಅಭ್ಯರ್ಥಿಗಳ ಪತ್ರಗಳನ್ನು ನಾಶಪಡಿಸಿದರು. ಇದನ್ನು ನೋಡಿಕೊಂಡು ಪೊಲೀಸರು ಸುಮ್ಮನೆ ನಿಂತಿರುವುದು ನಾಚಿಕೆಗೇಡಿನ ಸಂಗತಿ” ಎಂದು ಪ್ರಾಮಾಣಿಕ್ ಆರೋಪಿಸಿದ್ದಾರೆ.
