ಉದಯವಾಹಿನಿ, ಕುರುಕ್ಷೇತ್ರ (ಹರಿಯಾಣ): ವೈಜ್ಞಾನಿಕ ಚಿಂತನೆ ಮತ್ತು ಆಧುನಿಕ ತಂತ್ರಜ್ಞಾನಗಳ ಬಳಕೆಯಿಂದ ಕೃಷಿಯನ್ನು ಲಾಭಾದಾಯಕವಾಗಿಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ, ಹರಿಯಾಣದ ಕುರುಕ್ಷೇತ್ರದ ಈ ಯುವ ಕೃಷಿಕ. ನಿವರಸಿ ಗ್ರಾಮದ ಮೋಹಿತ್ ಕೃಷಿಯಲ್ಲಿ ವೈವಿಧ್ಯೀಕರಣವನ್ನು ಬಳಸಿ ಹೇಗೆ ಹೈಟೆಕ್ ಉದ್ಯಮವನ್ನಾಗಿ ಪರಿವರ್ತಿಸಲು ಸಾಧ್ಯ ಎಂಬುದನ್ನು ಸಮಾಜಕ್ಕೆ ತೋರಿಸಿಕೊಟ್ಟಿದ್ದಾರೆ.
ಮೋಹಿತ್ ಕೃಷಿಯನ್ನು ಆಧುನೀಕರಣಗೊಳಿಸುವ ಕೌಶಲ್ಯ ಕಲಿಯಲು ವಿದೇಶದಲ್ಲಿ ಅಧ್ಯಯನಕ್ಕೆ ಮುಂದಾದರು, ಅದರಂತೆ ಆಸ್ಟ್ರೇಲಿಯಾದಲ್ಲಿ ತೋಟಗಾರಿಕೆ ಬಗ್ಗೆ ಅಧ್ಯಯನ ಮಾಡಿ, ಅಲ್ಲಿ ಅತ್ಯುತ್ತಮ ತರಬೇತಿ ಪಡೆದರು. “ನಾನು ಹೈಟೆಕ್ ರೀತಿಯಲ್ಲಿ ತರಕಾರಿ ನರ್ಸರಿಯನ್ನು ಪ್ರಾರಂಭಿಸಲು ನಿರ್ಧರಿಸಿದೆ. ಅದಕ್ಕಾಗಿ ನಾನು ಆಸ್ಟ್ರೇಲಿಯಾಕ್ಕೆ ತೆರಳಿ ಅಲ್ಲಿ ತಾಂತ್ರಿಕ ಜ್ಞಾನವನ್ನು ಪಡೆಯುವುದರ ಜೊತೆಗೆ ತೋಟಗಾರಿಕೆಯನ್ನು ಹೇಗೆ ಲಾಭದಾಯಕವಾಗಿಸುವುದು ಎಂಬುದರ ಬಗ್ಗೆ ಅಧ್ಯಯನ ಮಾಡಿದೆ. ನನ್ನ ಚಿಕ್ಕಪ್ಪ ಕೂಡ ಅಲ್ಲಿ ತರಬೇತಿ ಪಡೆದರು. ಆಧುನಿಕ ತಂತ್ರಗಳನ್ನು ಅರ್ಥಮಾಡಿಕೊಂಡ ನಂತರ, ಅವುಗಳನ್ನು ನಮ್ಮ ಜಮೀನಿನಲ್ಲಿ ಅಳವಡಿಸಿದೆ. ನಮ್ಮ ನರ್ಸರಿಯ ಗುಣಮಟ್ಟ ಮತ್ತು ಉತ್ಪಾದನೆ ಎರಡೂ ಹೆಚ್ಚಾಯಿತು ಎಂದು ಈಟಿವಿ ಭಾರತ್ಗೆ ಅವರು ತಿಳಿಸಿದ್ದಾರೆ.
2011ರಲ್ಲಿ ಪಾಲಿಹೌಸ್ ಸ್ಥಾಪಿಸಿ ಹೂವುಗಳನ್ನು ಬೆಳೆಸುವ ಮೂಲಕ ಮೋಹಿತ್ ಆಧುನಿಕ ಕೃಷಿ ಮಾಡುವುದನ್ನು ಪ್ರಾರಂಭಿಸಿದರು. ಇದರಿಂದ ಈಗಲೂ ಉತ್ತಮ ಆದಾಯ ಗಳಿಸುತ್ತಿದ್ದಾರೆ. ಇದನ್ನು ಮತ್ತಷ್ಟು ಸುಧಾರಿಸುವ ಉದ್ದೇಶದಿಂದ 2019-20ರಲ್ಲಿ ಹೈಟೆಕ್ ತರಕಾರಿ ನರ್ಸರಿ ಪ್ರಾರಂಭಿಸಿದೆ. ಅಲ್ಲಿಂದ ನನ್ನ ಜೀವನದ ಹೊಸ ಪ್ರಯಾಣ ಆರಂಭವಾಯಿತು. ‘ಚಹಲ್ ನರ್ಸರಿ’ ಎಂಬ ಹೆಸರಿನಿಂದ ನನ್ನ ನರ್ಸರಿ ನೋಂದಾಯಿತವಾಗಿದ್ದು, ದೇಶಾದ್ಯಂತ ಅನೇಕ ರಾಜ್ಯಗಳಲ್ಲಿ ಮನ್ನಣೆ ಗಳಿಸಿದೆ” ಎಂದು ಅವರು ತಮ್ಮ ಅನುಭವವನ್ನು ಹಂಚಿಕೊಂಡರು.
