ಉದಯವಾಹಿನಿ, ಬಾಗೇಶ್ವರ (ಉತ್ತರಾಖಂಡ): ಉತ್ತರಾಖಂಡ ರಾಜ್ಯ ರಚನೆಯಾದ ಎರಡು ದಶಕಗಳ ನಂತರ, ಸರ್ಕಾರಿ ಯೋಜನೆಗಳು ಮತ್ತು ಗ್ರಾಮೀಣ ಅಭಿವೃದ್ಧಿಗೆ ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡಿದೆ. ಆದರೆ ಬೆಟ್ಟದಲ್ಲಿರುವ ಹಳ್ಳಿಗಳಿಂದ ವಲಸೆ ನಿರಂತರ ಸವಾಲಾಗಿದೆ. ಪರಿಣಾಮ ಭೂತ ಗ್ರಾಮಗಳು ಎಂದು ಕರೆಯಲ್ಪಡುವ ಹಳ್ಳಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಬಾಗೇಶ್ವರ ಜಿಲ್ಲೆಯ ಭಯೇದಿ ಗ್ರಾಮವು ಈ ಬೆಳೆಯುತ್ತಿರುವ ಬಿಕ್ಕಟ್ಟಿನ ಇತ್ತೀಚಿನ ಉದಾಹರಣೆಯಾಗಿದೆ. ಬಾಗೇಶ್ವರ ಜಿಲ್ಲಾ ಕೇಂದ್ರದಿಂದ ಕೇವಲ 12 ಕಿಲೋಮೀಟರ್ ದೂರದಲ್ಲಿರುವ ಭಯೇದಿ ಗ್ರಾಮವು ಈಗ ಕೇವಲ 52 ಕುಟುಂಬಗಳಿಗೆ ನೆಲೆಯಾಗಿದೆ. ಅಲ್ಲಿ ಒಂದು ಕಾಲದಲ್ಲಿ 110 ಮನೆಗಳು ಇದ್ದವು. ಅನೇಕ ಮನೆಗಳು ಕರಾಳ ಚಿತ್ರಣವನ್ನು ನೀಡುತ್ತವೆ. ಅವುಗಳಿಗೆ ಬೀಗ ಜಡಿಯಲಾಗಿದೆ. ಅವುಗಳ ತುಕ್ಕು ಹಿಡಿದ ಬಾಗಿಲುಗಳು ಮತ್ತು ಕಿಟಕಿಗಳು ಉತ್ತಮ ಭವಿಷ್ಯವನ್ನು ಹುಡುಕುತ್ತಾ ಹೊರಟ ಕುಟುಂಬಗಳ ಕಥೆಗಳನ್ನು ಹೇಳುತ್ತಿವೆ.
ಗಿಡಗಂಟಿಗಳು, ಮಿತಿಮೀರಿ ಬೆಳೆದ ಪೊದೆಗಳು ಮತ್ತು ನಿರ್ಲಕ್ಷಿತ ಮಾರ್ಗಗಳು ಗ್ರಾಮದ ಕ್ರಮೇಣ ಅವನತಿಯನ್ನು ಸೂಚಿಸುವಂತಿವೆ. ಒಂದು ಕಾಲದಲ್ಲಿ ದೈನಂದಿನ ಜೀವನದೊಂದಿಗೆ ಪ್ರತಿಧ್ವನಿಸುತ್ತಿದ್ದ ಮಣ್ಣು ಮತ್ತು ಇಟ್ಟಿಗೆ ಮನೆಗಳು ಈಗ ಕಳೆ ಮತ್ತು ಕಾಡು ಬಳ್ಳಿಗಳಿಂದ ಆವೃತವಾಗಿವೆ. ಒಂದು ಕಾಲದಲ್ಲಿ ಗ್ರಾಮಸ್ಥರು ತಮ್ಮ ದಿನಚರಿಯಲ್ಲಿ ತೊಡಗಿಕೊಳ್ಳುತ್ತಿದ್ದ ಹಾದಿಗಳಲ್ಲಿ ಹುಲ್ಲು ಬೆಳೆದಿದೆ. ಒಂದು ಕಾಲದಲ್ಲಿ ಜೀವಂತವಾಗಿದ್ದ ವಸಾಹತು ನಿಧಾನವಾಗಿ ನಿರ್ಜನ ಪ್ರದೇಶಕ್ಕೆ ತಿರುಗುತ್ತಿದೆ.
ಕಳೆದ ನಾಲ್ಕೈದು ದಶಕಗಳಲ್ಲಿ ವಲಸೆಯ ವೇಗ ಹೆಚ್ಚಾಗಿದೆ ಎಂದು ಇಲ್ಲಿನ ನಿವಾಸಿಗಳು ಹೇಳುತ್ತಾರೆ. ಗುಣಮಟ್ಟದ ಶಿಕ್ಷಣ, ಆರೋಗ್ಯ ರಕ್ಷಣೆ ಮತ್ತು ಉದ್ಯೋಗಾವಕಾಶಗಳಂತಹ ಮೂಲ ಸೌಲಭ್ಯಗಳ ಕೊರತೆಯೇ ಯುವ ಪೀಳಿಗೆ ನಗರಗಳಿಗೆ ವಲಸೆ ಹೋಗಲು ಕಾರಣ ಎಂಬುದು ನಿವಾಸಿಗಳ ಆಂಬೋಣ. 1980ರ ದಶಕದ ಆರಂಭದಲ್ಲಿ ವಿದ್ಯುತ್ ಮತ್ತು ನೀರು ಗ್ರಾಮವನ್ನು ತಲುಪಿತ್ತು. ಆದರೆ, ಅಭಿವೃದ್ಧಿ ಬಹಳ ನಂತರ ಬಂದಿತು ಎಂಬುದು ಗ್ರಾಮಸ್ಥ ಮೋಹನ್ ಜೋಶಿ ಅವರ ಮಾತು.
