ಉದಯವಾಹಿನಿ,ಬೆಂಗಳೂರು: ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಜೂನ್ 22 ಗುರುವಾರ ಕರ್ನಾಟಕ ಬಂದ್‌ಗೆ ಕರೆ ನೀಡಿದೆ. ಕರ್ನಾಟಕ ರಾಜ್ಯ ಸರ್ಕಾರ ಏಕಾಏಕಿ ವಿದ್ಯುತ್ ದರ ಏರಿಕೆ ಮಾಡಿರುವ ನೀತಿಯನ್ನು ಖಂಡಿಸಿರುವ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ (KCCI) ಒಂದು ದಿನಗಳ ಬಂದ್ ಕರೆ ನೀಡಿದೆ. ಇದೇ ಮೊದಲ ಬಾರಿಗೆ ವಾಣಿಜ್ಯೋದ್ಯಮ ಸಂಸ್ಥೆಯೊಂದು ವಿದ್ಯುತ್ ದರ ಏರಿಕೆ ವಿರುದ್ಧ ದನಿ ಎತ್ತಿದ್ದು, ಈ ಕೂಡಲೇ ದರ ಪರಿಷ್ಕರಣೆ ಮಾಡಬೇಕು ಎಂದು ಸರ್ಕಾರಕ್ಕೆ ಡೆಡ್‌ಲೈನ್ ನೀಡಿದೆ.
ಈ ಸಂಬಂಧ ಕಳೆದ ಎಂಟು ದಿನಗಳಿಂದ ಕರ್ನಾಟಕ ವಾಣಿಜ್ಯೋದ್ಯಮ ಸಂಘವು ಹಲವರನ್ನು ಸಂಪರ್ಕಿಸಿದೆ. ವಿದ್ಯುತ್ ದರ ಏರಿಕೆಯ ಪರಿಣಾಮಗಳ ಗಂಭೀರತೆಯನ್ನು ಮನವರಿಕೆ ಮಾಡಲು ಯತ್ನಿಸಿದೆ. ಆದರೆ, ಅಧಿಕಾರಿಗಳಿಂದಾಗಲೀ, ಸರ್ಕಾರದಿಂದಾಗಲೀ ಯಾವುದೇ ಪರಿಹಾರ ಸಿಕ್ಕಿಲ್ಲ. ಹೀಗಾಗಿ, ಬಂದ್ ಮಾಡೋದೊಂದೇ ಮಾರ್ಗ ಎಂದು ಸಂಘ ಹೇಳಿದೆ. ಸರ್ಕಾರದ ಗಮನ ಸೆಳೆಯಲು ನಾವು ಈ ಬಂದ್ ಕರೆ ನೀಡಿದ್ದೇವೆ. ಸರ್ಕಾರ ವಿದ್ಯುತ್ ದರ ಪರಿಷ್ಕರಣೆ ಮಾಡಿ, ದರ ಇಳಿಕೆ ಮಾಡುತ್ತದೆ ಎಂಬ ನಂಬಿಕೆಯಲ್ಲಿದ್ದೇವೆ ಎಂದು ಸಂಘದ ಮಾಧ್ಯಮ ಪ್ರಕಟಣೆಯಲ್ಲಿ ವಿವರಿಸಲಾಗಿದೆ.
