ಉದಯವಾಹಿನಿ,ಹೊನ್ನಾಳಿ: ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆಯಿಂದ ನಿತ್ಯ ಕೆಎಸ್‌ಆರ್‌ಟಿಸಿ ಬಸ್‌ಗಳು ತುಂಬಿ ತುಳುಕುತ್ತಿವೆ. ಭಾನುವಾರವಂತೂ ಮಣ್ಣೆತ್ತಿನ ಅಮಾವಾಸ್ಯೆ ಅಂಗವಾಗಿ ವಿವಿಧೆಡೆ ದೇವರ ದರ್ಶನಕ್ಕೆ ತೆರಳಲು ಮಹಿಳಾ ಮಣಿಗಳು ಹೊನ್ನಾಳಿಯಲ್ಲಿ ಬಸ್ ಏರಲು ಹರಸಾಹಸಪಟ್ಟರು. ಹೊನ್ನಾಳಿ ಹಾಗೂ ನ್ಯಾಮತಿ ಅವಳಿ ತಾಲೂಕುಗಳಿಂದ ಇತರ ಗ್ರಾಮಗಳಿಗೆ, ಪಟ್ಟಣಗಳಿಗೆ, ನಗರಗಳಿಗೆ ತೆರಳುವ ಸರ್ಕಾರಿ ಬಸ್‌ಗಳು ಕಾಲಿಡಲು ಜಾಗವಿಲ್ಲದಷ್ಟು ತುಂಬುತ್ತಿವೆ. ಟಿಕೆಟ್ ನೀಡಲು ಕಂಡಕ್ಟರ್ ಪಡುವ ಕಷ್ಟ ದೇವರಿಗೆ ಪ್ರೀತಿ ಎನ್ನುವಂತಾಗಿದೆ. ಧಾರ್ಮಿಕ ಕ್ಷೇತ್ರಗಳಾದ ಧರ್ಮಸ್ಥಳ, ಕುಕ್ಕೆಸುಬ್ರಮಣ್ಯ, ಮುರುಡೇಶ್ವರ, ಶೃಂಗೇರಿ ಸೇರಿದಂತೆ ಇತರ ಧಾರ್ಮಿಕ ಕ್ಷೇತ್ರಗಳಿಗೆ ಮಹಿಳೆಯರು ತಂಡೋಪತಂಡವಾಗಿ ತೆರಳುತ್ತಿದ್ದಾರೆ. ಬಹುತೇಕ ಎಲ್ಲ ಧಾರ್ಮಿಕ ಕ್ಷೇತ್ರಗಳಲ್ಲಿ ಉಚಿತ ಊಟದ ವ್ಯವಸ್ಥೆ ಇರುವುದರಿಂದ ಹಣವಿಲ್ಲದೇ ಬಸ್‌ಗಳಲ್ಲಿ ತೆರಳಿ ಕ್ಷೇತ್ರ ದರ್ಶನ ಮಾಡಿಬರುವ ಹುಮ್ಮಸ್ಸು ಮಹಿಳೆಯರಲ್ಲಿ ಎದ್ದು ಕಾಣುತ್ತಿದೆ.
