ಉದಯವಾಹಿನಿ,ಶಿವಮೊಗ್ಗ: ನೀರಾವರಿ ಇಲಾಖೆಯ ಇಂಜಿನಿಯರ್ ಪತ್ನಿಯನ್ನು ಬಾಯಿಗೆ ಬಟ್ಟೆ ತುರುಕಿ ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ಇಂದು(ಜೂನ್ 18) ಶಿವಮೊಗ್ಗದ ವಿಜಯನಗರದಲ್ಲಿ ಬೆಳಕಿಗೆ ಬಂದಿದೆ. ವಿಜಯನಗರದ ಕಮಲಮ್ಮ(57) ಕೊಲೆಯಾದ ಮಹಿಳೆ. ಪತಿ ಮಲ್ಲಿಕಾರ್ಜುನ ಗೋವಾಕ್ಕೆ ತೆರಳಿದ್ದಾರೆ. ಇದರಿಂದ ಕಮಲಮ್ಮ ಒಬ್ಬರೆ ಇದ್ದಾಗ ದುಷ್ಕರ್ಮಿಗಳು ಮನೆಗೆ ನುಗ್ಗಿ ಈ ಕೃತ್ಯ ಎಸಗಿದ್ದಾರೆ. ಕಮಲಮ್ಮ ಅವರ ಪತಿ ಚಿತ್ರದುರ್ಗದಲ್ಲಿ ನೀರಾವರಿ ಇಲಾಖೆಯಲ್ಲಿ ಇಂಜಿನಿಯರ್ ಆಗಿದ್ದು, ಪುತ್ರ ಬೆಂಗಳೂರಿನಲ್ಲಿ ಎಂಬಿಬಿಎಸ್ ಓದುತ್ತಿದ್ದಾನೆ. ಕಮ್ಮಲಮ್ಮ ಒಬ್ಬರೇ ಮನೆಯಲ್ಲಿ ಇದ್ದರು. ಶನಿವಾರ ಸಂಜೆಯೇ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ರಾತ್ರಿ ಪತಿ ಮತ್ತು ಪುತ್ರ ಇಬ್ಬರೂ ಕಮಲಮ್ಮ ಅವರಿಗೆ ಪೋನ್ ಮಾಡಿದ್ದರೂ ಕರೆ ಸ್ವೀಕರಿಸಿರಲಿಲ್ಲ. ಇದರಿಂದ ಮಲ್ಲಿಕಾರ್ಜುನ ಅವರು ಪರಿಚಯಸ್ಥರು ಮತ್ತು ನೆರೆಹೊರೆಯವರಿಗೆ ಕರೆ ಮಾಡಿ ಮನೆಯ ಬಳಿ ನೋಡಿಕೊಂಡು ಬರಲು ತಿಳಿಸಿದ್ದಾರೆ. ಮನೆ ಬಲ್ಬ್ ಗಳನ್ನೂ ಆನ್ ಮಾಡಿರಲಿಲ್ಲ. ಅನುಮಾನಗೊಂಡು ಮನೆ ಬಾಗಿಲು ತೆರದು ನೋಡಿದಾಗ ಅಡುಗೆ ಕೋಣೆಯಲ್ಲಿ ಕಮಲಮ್ಮ ಅವರ ಮೃತದೇಹ ಪತ್ತೆಯಾಗಿದೆ. ಬಾಯಿಗೆ ಬಟ್ಟೆ ತುರುಕಿದ್ದು ಕಿವಿಯೋಲೆಗಳನ್ನು ಕಿತ್ತುಕೊಂಡು ಹೋಗಿದ್ದಾರೆ. ತುಂಗಾನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.
