ಉದಯವಾಹಿನಿ, ಬಂಕಾ: ವೃದ್ಧರೊಬ್ಬರ ಮೇಲೆ ಬೀದಿ ಹಸುಗಳು ದಾಳಿ ಮಾಡಿರುವ ಆಘಾತಕಾರಿ ಘಟನೆ ಬಿಹಾರದ ಬಂಕಾ ಜಿಲ್ಲೆಯಲ್ಲಿ ಭಾನುವಾರ ನಡೆದಿದೆ. ಎರಡು ಹಸುಗಳು ದಾಳಿ ಮಾಡಿರುವ ಭಯಾನಕ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಬಂಕಾ ಜಿಲ್ಲೆಯ ಪುನಿಸಿಯಾ ಗ್ರಾಮದಲ್ಲಿ ಘಟನೆ ನಡೆದಿದೆ. ಬರಹತ್ ನಿವಾಸಿ ಎಂದು ಗುರುತಿಸಲಾದ ವೃದ್ಧ ವ್ಯಕ್ತಿಯ ಮೇಲೆ ಹಸುಗಳು ಏಕಾಏಕಿ ದಾಳಿ ಮಾಡಿವೆ. ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆಯಾಗಿದ್ದು, ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ವಿಡಿಯೊದಲ್ಲಿ, ಹಸು ವೃದ್ಧ ವ್ಯಕ್ತಿಯ ಮೇಲೆ ದಾಳಿ ಮಾಡುತ್ತಿರುವುದನ್ನು ಕಾಣಬಹುದಾಗಿದೆ.
ವೃದ್ಧ ವ್ಯಕ್ತಿ ಮೋಟಾರ್ ಸೈಕಲ್‍ನಿಂದ ಕೆಳಗಿಳಿಯುತ್ತಿದ್ದಂತೆ ಹಸುವೊಂದು ಅವರನ್ನು ಕೆಡವಿದೆ. ಈ ವೇಳೆ ಹಿಂದಿನಿಂದ ಬಂದ ಇನ್ನೊಂದು ಹಸು ಕೂಡ ಅವರ ಮೇಲೆ ದಾಳಿ ಮಾಡಿದೆ. ಇದನ್ನು ನೋಡಿದ ಸ್ಥಳೀಯರು ಕೂಡಲೇ ಸ್ಥಳಕ್ಕೆ ಧಾವಿಸಿದರು. ಆದರೆ, ಸಹಾಯಕ್ಕೆ ಧಾವಿಸಿದವರ ಮೇಲೂ ಅದು ದಾಳಿಯೆಸಗಿದೆ.
ವೃದ್ಧನನ್ನು ಕಾಪಾಡಲು ಎಷ್ಟೇ ಪ್ರಯತ್ನಪಟ್ಟರೂ ಕೂಡ ಎರಡು ಹಸುಗಳು ಮಾತ್ರ ಅವರನ್ನು ಬಿಡುವಂತೆ ಕಾಣಲಿಲ್ಲ. ಪದೇ ಪದೇ ಅವರ ಮೇಲೆ ತುಳಿಯುವುದನ್ನು ವಿಡಿಯೋದಲ್ಲಿ ಕಾಣಬಹುದು. ಕೋಲು ಮತ್ತು ಕಲ್ಲುಗಳನ್ನು ಬಳಸಿ ಪ್ರಾಣಿಗಳನ್ನು ಓಡಿಸಲು ಪ್ರಯತ್ನಿಸಿದರೂ, ಹಸುಗಳು ತಮ್ಮ ದಾಳಿಯನ್ನು ಮುಂದುವರೆಸಿದವು. ಕೊನೆಗೆ ಗುಂಪು ಸೇರಿದ ಸ್ಥಳೀಯರು ಉದ್ದನೆಯ ಕೋಲು ತೆಗೆದುಕೊಂಡು ಅವನ್ನು ಓಡಿಸಿದ್ದಾರೆ.ಅಂತಿಮವಾಗಿ ವೃದ್ಧ ವ್ಯಕ್ತಿಯನ್ನು ಕಾಪಾಡಲು ಸ್ಥಳೀಯರು ಹರಸಾಹಸಪಟ್ಟರು. ರಕ್ಷಣೆ ಮಾಡಲು ಮುಂದಾದ ಒಬ್ಬ ವ್ಯಕ್ತಿಯ ಮೇಲೂ ಹಸು ದಾಳಿ ಮಾಡಿದ್ದರಿಂದ ಘಟನೆಯಲ್ಲಿ ಅವರೂ ಗಾಯಗೊಂಡಿದ್ದಾರೆ. ಹಸು ಅವರ ಮೇಲೆ ಹಾರಿ, ಎದೆಯ ಮೇಲೆ ಹತ್ತಿತು ಎಂದು ವರದಿಯಾಗಿದೆ.
ವರದಿಯ ಪ್ರಕಾರ, ಗಾಯಾಳು ವೃದ್ಧನನ್ನು ಸ್ಥಳೀಯರು ಹತ್ತಿರದ ಆಸ್ಪತ್ರೆಗೆ ದಾಖಲಿಸಿದರು. ಅವರ ಗಾಯಗಳ ಬಗ್ಗೆ ಸಂಪೂರ್ಣ ಪ್ರಮಾಣವನ್ನು ಅಧಿಕೃತವಾಗಿ ದೃಢಪಡಿಸಲಾಗಿಲ್ಲವಾದರೂ, ಅವರು ವೈದ್ಯಕೀಯ ಆರೈಕೆಯಲ್ಲಿದ್ದಾರೆ. ಗಾಯಗೊಂಡ ಎರಡನೇ ವ್ಯಕ್ತಿಯೂ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಲಾಗಿದೆ.
