ಉದಯವಾಹಿನಿ, ಹೈದರಾಬಾದ್ : ರಂಗಾರೆಡ್ಡಿ ಜಿಲ್ಲೆಯ ಮೊಯಿನಾಬಾದ್​ನಲ್ಲಿ ನಿನ್ನೆ ರಾತ್ರಿ ಡ್ರಗ್ಸ್​​ ಪಾರ್ಟಿ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಇದರಲ್ಲಿ ಹಾಲಿ ಸಂಸದ, ಮಾಜಿ ಶಾಸಕ ಸೇರಿ 6 ಮಂದಿ ಡ್ರಗ್ಸ್​​ ಸೇವನೆ ಮಾಡಿರುವುದು ಪರೀಕ್ಷೆಯಲ್ಲಿ ದೃಢವಾಗಿದೆ.
ಡ್ರಗ್ಸ್​​ ಪಾರ್ಟಿ ನಡೆಯುತ್ತಿರುವ ಬಗ್ಗೆ ಸಿಕ್ಕ ನಿಖರ ಮಾಹಿತಿಯ ಆಧಾರದ ಮೇಲೆ ದಾಳಿ ನಡೆಸಲಾಗಿದ್ದು, ಸ್ಥಳದಲ್ಲಿ ಓರ್ವ ಮಹಿಳೆ ಸೇರಿ 11 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಇಂದು ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು. ಹಾಲಿ ಸಂಸದ, ಮಾಜಿ ಶಾಸಕ ಸೇರಿ 6 ಮಂದಿ ರಕ್ತ ಪರೀಕ್ಷೆಯಲ್ಲಿ ಡ್ರಗ್ಸ್​ ಸೇವನೆ ದೃಢಪಟ್ಟಿದೆ ಎಂದು ಎಸ್‌ಪಿ ಗಿರಿಧರ್ ಅವರು ತಿಳಿಸಿದ್ದಾರೆ.

ಮೊಯಿನಾಬಾದ್​​ನ ಅಜೀಜ್‌ನಗರದಲ್ಲಿರುವ ಮಾಜಿ ಶಾಸಕ ರೋಹಿತ್ ರೆಡ್ಡಿ ಅವರ ಫಾರ್ಮ್‌ಹೌಸ್‌ನಲ್ಲಿ ಈ ಡ್ರಗ್ಸ್​ ಪಾರ್ಟಿ ನಡೆಯುತ್ತಿತ್ತು. ಈ ಬಗ್ಗೆ ಅಧಿಕೃತ ಮೂಲಗಳಿಂದ ಮಾಹಿತಿ ಬಂದಿತ್ತು. ಶೋಧ ಕಾರ್ಯಾಚರಣೆ ನಡೆಸಲಾಯಿತು ಎಂದು ಅವರು ಮಾಹಿತಿ ನೀಡಿದರು.

ಪಾರ್ಟಿಯಲ್ಲಿ ಭಾಗಿಯಾದ ಎಲ್ಲರನ್ನು ರ್ಯಾಪಿಡ್​ ಪರೀಕ್ಷೆಗೆ ಒಳಪಡಿಸಲಾಯಿತು. ಬಳಿಕ ಎರ್ರಗಡ್ಡ ಆಸ್ಪತ್ರೆಯಲ್ಲಿ ಮಾದಕ ದ್ರವ್ಯ ಪರೀಕ್ಷೆಗಳನ್ನು ನಡೆಸಲಾಯಿತು. ಅದರಲ್ಲಿ ಸಂಸದ, ಶಾಸಕರ ಪರೀಕ್ಷೆ ಪಾಸಿಟಿವ್ ಎಂದು ತೋರಿಸಿದೆ. ಪಾರ್ಟಿ ನಡೆದ ಫಾರ್ಮ್​​ ಹೌಸ್​ ಮಾಜಿ ಶಾಸಕ ಪೈಲಟ್ ರೋಹಿತ್ ರೆಡ್ಡಿ ಅವರಿಗೆ ಸೇರಿದ್ದಾಗಿದೆ. ಮಾದಕ ದ್ರವ್ಯ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಿ ತೋಟದ ಮನೆಯನ್ನು ವಶಪಡಿಸಿಕೊಳ್ಳಲು ಪೊಲೀಸರು ಮುಂದಾಗಿದ್ದಾಗಿ ತಿಳಿದುಬಂದಿದೆ.

ಶೋಧ ವೇಳೆ ಗುಂಡಿನ ದಾಳಿ: ಬಿಎಂಆರ್ ಫಾರ್ಮ್‌ಹೌಸ್‌ನಲ್ಲಿ ನಡೆದ ಮಾದಕ ದ್ರವ್ಯ ಪಾರ್ಟಿಯಲ್ಲಿ ರಾಜಕೀಯ, ಉದ್ಯಮ ಮತ್ತು ರಿಯಲ್ ಎಸ್ಟೇಟ್ ಕ್ಷೇತ್ರಗಳ 10 ಜನರು ಮದ್ಯ, ಡ್ರಗ್ಸ್ ಮತ್ತು ಹುಕ್ಕಾ ಸೇವಿಸುತ್ತಿರುವುದು ಪೊಲೀಸರಿಗೆ ಕಂಡುಬಂದಿದೆ. 10 ಜನರಲ್ಲಿ 9 ಮಂದಿ ಪುರುಷರು ಮತ್ತು ಓರ್ವ ಮಹಿಳೆ ಇದ್ದಾರೆ.

ಪೊಲೀಸರನ್ನು ನೋಡಿದ ದೆಹಲಿಯ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು, ಇನ್ನೊಬ್ಬ ಉದ್ಯಮಿ ಬಳಿಯಿದ್ದ ಬಂದೂಕಿನಿಂದ ಒಂದು ಸುತ್ತಿನ ಗುಂಡು ಹಾರಿಸಿದ್ದಾರೆ. ಇದರಿಂದ ಅವರನ್ನು ಪೊಲೀಸರು ಸ್ಥಳದಲ್ಲೇ ಬಂಧಿಸಿದ್ದಾರೆ. ರಾತ್ರಿ 9:30 ರಿಂದ ಬೆಳಗ್ಗೆ 2 ಗಂಟೆಯವರೆಗೆ ಫಾರ್ಮ್‌ಹೌಸ್ ಶೋಧ ನಡೆದಿದೆ. ಮದ್ಯದ ಬಾಟಲಿಗಳೊಂದಿಗೆ 2 ಗ್ರಾಂ ಡ್ರಗ್ಸ್​ ಅನ್ನೂ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!