ಉದಯವಾಹಿನಿ, ಅಹಮದಾಬಾದ್(ಗುಜರಾತ್​): ವಿಚಾರಣಾಧೀನ ಕೈದಿಯೊಬ್ಬರಿಗೆ ಪೊಲೀಸರ ಸಮ್ಮುಖದಲ್ಲಿ ತನ್ನ 14 ವರ್ಷದ ಸಾಕು ನಾಯಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಗುಜರಾತ್ ಹೈಕೋರ್ಟ್ ಅನುಮತಿಸಿದೆ.
ನ್ಯಾಯಮೂರ್ತಿ ಉತ್ಕರ್ಷ್ ಠಾಕೋರ್​ಭಾಯ್ ದೇಸಾಯಿ ಅವರು ಅರ್ಜಿಯನ್ನು ವಿಚಾರಣೆ ನಡೆಸಿದರು. ಈ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಅರ್ಜಿದಾರರು ಜರ್ಮನ್ ಶೆಫರ್ಡ್ ನಾಯಿಯನ್ನು 14 ವರ್ಷಗಳಿಂದ ಬೆಳೆಸಿದ್ದಾರೆ ಮತ್ತು ಭಾವನಾತ್ಮಕವಾಗಿ ಅದರೊಂದಿಗೆ ಬೆರೆತುಹೋಗಿದ್ದಾರೆ. ಹಾಗಾಗಿ, ಅಂತಿಮ ಆಚರಣೆಗಳನ್ನು ಮಾಡಲು ಬಯಸುತ್ತಾರೆ ಎಂದು ವಿನಂತಿಸಿಕೊಂಡರು.

ಈ ವಾದವನ್ನು ಆಲಿಸಿದ ಏಕಸದಸ್ಯ ಪೀಠ, ತಾತ್ಕಾಲಿಕ ಜಾಮೀನು ನೀಡುವ ಬದಲಿಗೆ ಅರ್ಜಿದಾರರನ್ನು ಲಾಜ್‌ಪೋರ್ ಕೇಂದ್ರ ಕಾರಾಗೃಹದಿಂದ ಸೂರತ್‌ನಲ್ಲಿರುವ ಅವರ ನಿವಾಸಕ್ಕೆ ಪೊಲೀಸ್ ಬೆಂಗಾವಲಿನೊಂದಿಗೆ ಕರೆದೊಯ್ಯುವಂತೆ ಆದೇಶಿಸಿದರು.

ಏನಿದು ಪ್ರಕರಣ? ಫೆಬ್ರವರಿ 2026ರಲ್ಲಿ ಮಹಿಳೆಯೊಬ್ಬರು ಸೂರತ್‌ನ ಅಥ್ವಾಲಿನ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ತಮ್ಮ ಪತಿ ಸೇರಿದಂತೆ ಕೆಲವು ವ್ಯಕ್ತಿಗಳ ವಿರುದ್ಧ ಗಂಭೀರ ಆರೋಪಗಳನ್ನು ಹೊರಿಸಿದ್ದರು. ದೂರಿನ ಪ್ರಕಾರ, ಮಹಿಳೆ 2000ರಲ್ಲಿ 25 ವರ್ಷಗಳ ಅವಧಿಯ ಐದು ಲಕ್ಷ ರೂಪಾಯಿಗಳ ವಿಮಾ ಪಾಲಿಸಿಯನ್ನು ಖರೀದಿಸಿದ್ದರು. ಅದರ ಅವಧಿ ಮುಕ್ತಾಯವಾದ ನಂತರ ಅವರಿಗೆ ಸುಮಾರು 19.87 ಲಕ್ಷ ಸಿಗುತ್ತಿತ್ತು.

ಪಾಲಿಸಿ ಖರೀದಿಸುವಾಗ ನಾನು ತನ್ನ ತಂದೆಯನ್ನು ನಾಮಿನಿ ಎಂದು ಹೆಸರಿಸಿದ್ದೆ. ಆದರೆ, ನನ್ನ ಪತಿ ವೈಟ್ನರ್ ಬಳಸಿ ನನ್ನ ತಂದೆಯ ಹೆಸರನ್ನು ತನ್ನ ಹೆಸರಿಗೆ ಬದಲಾಯಿಸಿದ್ದರು. ಇದಲ್ಲದೆ, ನನ್ನ ಸಹಿಯನ್ನು ನಕಲಿ ಮಾಡಿ ವಿಮಾ ಪಾಲಿಸಿಯ ಮೇಲೆ ಸಾಲ ಪಡೆದು ಹಣವನ್ನು ಹಿಂತೆಗೆದುಕೊಂಡರು. ಈ ರೀತಿಯಾಗಿ, ಒಟ್ಟು ₹17.69 ಲಕ್ಷ ಹಿಂಪಡೆದಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದರು.

 

Leave a Reply

Your email address will not be published. Required fields are marked *

error: Content is protected !!