ಉದಯವಾಹಿನಿ, ಬೆಂಗಳೂರು: ರಾಜ್ಯದ ಸಣ್ಣ ವ್ಯಾಪಾರಿಗಳಿಗೆ ಡಿಜಿಟಲ್ ಪೇಮೆಂಟ್‌ನಿಂದ ತೆರಿಗೆ ನೋಟೀಸ್ ನೀಡಲಾಗುತ್ತಿದೆ ಅದಕ್ಕೆ ರಾಜ್ಯ ಸರ್ಕಾರ ಹೊಣೆ ಎಂದು ಗೂಬೆ ಕೂರಿಸುತ್ತಿರುವ ಬಿ.ಜೆ.ಪಿ ಅವರೇ, ನಾಚಿಕೆ‌, ಮಾನ, ಮಾರ್ಯಾದೆ ಎಂಬ ಪದಕ್ಕೆ ಅರ್ಥವೇನಾದರೂ ಗೊತ್ತಿದ್ದರೆ, ಸತ್ಯ ಮಾತನಾಡುವುದನ್ನು ಕಲಿಯಿರಿ ಎಂದು ಸಚಿವ ರಾಮಲಿಂಗಾ ರೆಡ್ಡಿಯವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸಣ್ಣ ವ್ಯಾಪಾರಿಗಳಿಗೆ ವಾಣಿಜ್ಯ ತೆರಿಗೆ ಇಲಾಖೆ ನೀಡುತ್ತಿರುವ ತೆರಿಗೆ ನೋಟಿಸ್ ಕುರಿತು ವಾಗ್ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ರಾಮಲಿಂಗಾ ರೆಡ್ಡಿಯವರು ಬಿಜೆಪಿಗೆ ತಿರುಗೇಟು ನೀಡಿದ್ದಾರೆ.ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ರಾಜ್ಯದ ಸಣ್ಣ ವ್ಯಾಪಾರಿಗಳಿಗೆ ಡಿಜಿಟಲ್ ಪೇಮೆಂಟ್‌ನಿಂದ ತೆರಿಗೆ ನೋಟೀಸ್ ನೀಡಲಾಗುತ್ತಿದೆ ಅದಕ್ಕೆ ರಾಜ್ಯ ಸರ್ಕಾರ ಹೊಣೆ ಎಂದು ಗೂಬೆ ಕೂರಿಸುತ್ತಿರುವ ಬಿ.ಜೆ.ಪಿ ಅವರೇ, ಮಗುವನ್ನು ಅಳುವಂತೆ ಮಾಡುವುದು ನೀವೇ, ನಂತರ ತೊಟ್ಟಿಲು ತೂಗುವುದು ನೀವೇ? ಎಷ್ಟು ಕಾಲ ಈ ಮೆಲೋ ಡ್ರಾಮವನ್ನು ಮುಂದುವರಿಸುವ ಇರಾದೆ ಇದೆ ಎಂದು ತಿಳಿಸುವಿರಾ? ಎಂದು ಪ್ರಶ್ನಿಸಿದ್ದಾರೆ.
ಜಿಎಸ್‌ಟಿ ವ್ಯವಸ್ಥೆಯು ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿದ್ದು, ಜಿ ಎಸ್‌ ಟಿ ಕೌನ್ಸಿಲ್ ಕೂಡ ಕೇಂದ್ರ ಸರ್ಕಾರದಡಿಯಲ್ಲಿ ಕೆಲಸ ಮಾಡುತ್ತದೆ ಎಂಬುದು ತಮಗೆ ತಿಳಿದಿಲ್ಲವೇ? ಅಥವಾ ತಿಳಿದು ಕೂಡ ಅಸಹಾಯಕರಾಗಿ, ಕೇಂದ್ರ ಸರ್ಕಾರವನ್ನು ಪ್ರಶ್ನಿಸುವ ತಾಕತ್ತಿಲ್ಲದೆ ಜನರನ್ನು ದಾರಿ ತಪ್ಪಿಸಲು ರಾಜ್ಯ ಸರ್ಕಾರದ ಮೇಲೆ ಗೂಬೆ ಕೂರಿಸುವ ತಮ್ಮ‌ ಹುನ್ನಾರವೇ?
ಜಿ ಎಸ್ ಟಿ ಕೌನ್ಸಿಲ್ ತೆಗೆದುಕೊಳ್ಳುವ ತೀರ್ಮಾನಗಳಿಗೆ ರಾಜ್ಯ ಸರ್ಕಾರ ನೇರ ಹೊಣೆಯಲ್ಲ. ತಮ್ಮ ಕುತಂತ್ರ ಆರೋಪಗಳು ಫಲಿಸುವುದಿಲ್ಲ. ಸಣ್ಣ ಮತ್ತು ಮಧ್ಯಮ ವ್ಯಾಪಾರಿಗಳಿಗೆ ನಿಜವಾಗಿಯೂ ಸಹಾಯ ಮಾಡುವ ಕಾಳಜಿ‌‌ ಇದ್ದಲ್ಲಿ, ಕೇಂದ್ರ ಸರ್ಕಾರಕ್ಕೆ ನಿಯೋಗ ತೆರಳಿ ಈ ಸಮಸ್ಯೆ ಪರಿಹರಿಸಿ, ಅದು ಬಿಟ್ಟು, ವ್ಯಾಪಾರಿಗಳಿಗೆ ಉಚಿತವಾಗಿ ಅಡಿಟರ್ ಸಲಹೆ ನೀಡುತ್ತೀವೆ ಎಂದು ಜಾಹೀರಾತು ಹಾಕಿ ತಮ್ಮ ಮಾರ್ಯಾದೆಯನ್ನು ಮತ್ತಷ್ಟು ಕಳೆದುಕೊಳ್ಳಬೇಡಿ. ಬಿ.ಜೆ.ಪಿ ಯವರೇ ನಾಚಿಕೆ‌, ಮಾನ, ಮಾರ್ಯಾದೆ ಎಂಬ ಪದಕ್ಕೆ ಅರ್ಥವೇನಾದರೂ ಗೊತ್ತಿದ್ದರೆ ,ಸತ್ಯ ಮಾತನಾಡುವುದನ್ನು ಕಲಿಯಿರಿ ಎಂದು ವಾಗ್ದಾಳಿ ನಡೆಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!