ಉದಯವಾಹಿನಿ, ಹುಬ್ಬಳ್ಳಿ: ಕೇಂದ್ರ ಸರ್ಕಾರ ನಮ್ಮ ಸರ್ವರ್ ಹಾಗೂ ಸಿಸ್ಟಮ್ಗಳನ್ನು ಇವಿಎಂ ಮಾದರಿಯಲ್ಲಿ ಹ್ಯಾಕ್ ಮಾಡಿದೆ. ಇದರಿಂದ ಗ್ಯಾರಂಟಿ ಯೋಜನೆ ಅರ್ಜಿ ಸಲ್ಲಿಸಲು ಸಮಸ್ಯೆಯಾಗುತ್ತಿದೆ ಎಂಬ ಸತೀಶ್ ಜಾರಕಿಹೊಳಿ ಆರೋಪಕ್ಕೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿರುಗೇಟು ನೀಡಿದ್ಧಾರೆ. ಈ ಕುರಿತು ಹುಬ್ಬಳ್ಳಿಯಲ್ಲಿ ಮಾತನಾಡಿದ ಸಚಿವ ಜೋಶಿ ಹ್ಯಾಕ್ ಆಗಿದ್ದರೆ ಸೈಬರ್ ಕ್ರೈಂನವರಿಗೆ ದೂರು ನೀಡಿ ತನಿಖೆ ಮಾಡಿಸಲಿ. ಸತೀಶ್ ಜಾರಕಿಹೊಳಿ ಅವರ ಹೇಳಿಕೆ ಹಾಸ್ಯಾಸ್ಪದವಾಗಿದ್ದು, ಗ್ಯಾರಂಟಿ ಯೋಜನೆಗಳನ್ನು ಜನತೆಗೆ ಕೊಡಲಾಗದೆ ಕಾಂಗ್ರೆಸ್ನವರು ಈ ರೀತಿ ಕುಂಟು ನೆಪಗಳನ್ನು ಹೇಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಕೈಯಲ್ಲಿ ಅಕ್ಕಿ ಕೊಡಲು ಆಗುತ್ತಿಲ್ಲ.
ಹೀಗಾಗಿ ಸುಳ್ಳು ಹೇಳುತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದು ತಿಂಗಳಾಯ್ತು ಇನ್ನೂ ಒಂದು ಕೆಜಿ ಅಕ್ಕಿ ಸಹ ಕೊಟ್ಟಿಲ್ಲ. ಈಗ ಕೊಡುತ್ತಿರುವ ಐದು ಕೆಜಿ ಅಕ್ಕಿ ನ್ಯಾಷನಲ್ ಫುಡ್ ಸೆಕ್ಯೂರಿಟಿ ಆ್ಯಕ್ಟ್ ಅಡಿಯಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕೊಡುತ್ತಿರುವುದು ಎಂದು ಹೇಳಿದ್ಧಾರೆ. ರಾಜ್ಯ ಕಾಂಗ್ರೆಸ್ ಸರ್ಕಾರ ಚುನಾವಣೆ ವೇಳೆ ಘೋಷಿಸಿದ್ದ ಗ್ಯಾರಂಟಿಗಳನ್ನು ಜಾರಿಗೆ ತರಲು ಹರಸಾಹಸ ಪಡುತ್ತಿದೆ. ಅನ್ನಭಾಗ್ಯ ಯೋಜನೆಯನ್ನು ಜಾರಿ ಮಾಡಲು ರಾಜ್ಯದಲ್ಲಿ ಅಕ್ಕಿ ಕಡಿಮೆಯಾಗಿದ್ದು, ಅನ್ಯ ರಾಜ್ಯಗಳ ಮೊರೆ ಹೋಗಿದೆ. ಈ ನಡುವೆ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶುರುವಾಗಿದೆ. ಆದರೆ ಸರ್ವಸ್ ಬಿಜಿ ಹಿನ್ನೆಲೆ ಜನರು ಅರ್ಜಿ ಹಾಕಲು ಪರದಾಡುವಂತಾಗಿದೆ.
