ಉದಯವಾಹಿನಿ, ಬೆಂಗಳೂರು: ಜುಲೈ.1ರಿಂದ ಬಿಪಿಎಲ್, ಎಪಿಎಲ್ ಕಾರ್ಡ್ ದಾರರಿಗೆ ಉಚಿತವಾಗಿ 10 ಕೆಜಿ ಅಕ್ಕಿಯನ್ನು ನೀಡಲಾಗುತ್ತದೆ ಎಂಬುದಾಗಿ ರಾಜ್ಯ ಕಾಂಗ್ರೆಸ್ ನೇತೃತ್ವದ ಸರ್ಕಾರ ಮಹತ್ವದ ಗ್ಯಾರಂಟಿ ಯೋಜನೆಯಾದಂತ ಅನ್ನಭಾಗ್ಯ ಯೋಜನೆ ಘೋಷಣೆ ಮಾಡಿತ್ತು. ಆದ್ರೇ ಈ ಯೋಜನೆಗೆ ಬೇಕಿರುವಂತ ಅಕ್ಕಿ ನೀಡಲು ಎಫ್ ಸಿಐ ನಿರಾಕರಿಸಿದ ಕಾರಣ, ಜುಲೈ.1ರಂದು 10 ಕೆಜಿ ಅಕ್ಕಿ ಸಿಗೋದು ಡೌಟ್ ಎನ್ನಲಾಗುತ್ತಿದೆ. ಈ ಕುರಿತು ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಸಿದ್ಧರಾಮಯ್ಯ, ದ್ವೇಷದ ರಾಜಕಾರಣ ಮಾಡುವ ಇವರಿಗೆ ಮಾನವೀಯತೆ, ಇದೆಯೇ? ದ್ವೇಷದ ರಾಜಕೀಯ ಮಾಡುತ್ತಾರಲ್ಲ ಎಂದು ಪ್ರಶ್ನಿಸಿದರು. ಕೇಂದ್ರದ ಈ ನಡೆಯನ್ನು ಖಂಡಿಸಿ ನಮ್ಮ ಪಕ್ಷದ ವತಿಯಿಂದ ಎಲ್ಲೆಡೆ ಪ್ರತಿಭಟನೆ ಮಾಡಲಾಗಿದೆ. ದುರುದ್ದೇಶದಿಂದ ಈ ಕೆಲಸ ಮಾಡಿದ್ದಾರೆ. ಹಣ ನೀಡಿ ಅಕ್ಕಿಯನ್ನು ಪಡೆಯುತ್ತೇವೆ.
ನಾವು ಸಹಕಾರಿ ಒಕ್ಕೂಟ ವ್ಯವಸ್ಥೆಯಲ್ಲಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಯಾವಾಗಲೂ ಹೇಳುತ್ತಾರೆ. ಇದೇ ಇವರ ಸಹಕಾರಿ ಒಕ್ಕೂಟ ವ್ಯವಸ್ಥೆಯೇ? ಎಂದು ಪ್ರಶ್ನಿಸಿದರು. ಬಿಜೆಪಿ ಸರ್ಕಾರ ಸರ್ವಾಧಿಕಾರಿಯಲ್ಲ. ಇದೊಂದು ಪ್ರಜಾಪ್ರಭುತ್ವದ ವ್ಯವಸ್ಥೆ, ಒಕ್ಕೂಟ ರಚನೆಯನ್ನು ಹೊಂದಿದ್ದೇವೆ. ಕೇಂದ್ರ ಸರ್ಕಾರವೇ ಭತ್ತ ಬೆಳೆಯುತ್ತದೆಯೇ. ಎಲ್ಲೆಲ್ಲಿ ಭತ್ತ ಬೆಳೆಯುತ್ತಾರೋ ಅಲ್ಲಿಂದ ಅಕ್ಕಿಯನ್ನು ಪಡೆಯುತ್ತಾರೆ. ಮಾತೆತ್ತಿದರೆ ಆಹಾರ ಭದ್ರತಾ ಕಾಯ್ದೆ ಎನ್ನುವ ಕೇಂದ್ರ ಸರ್ಕಾರ, ಆಹಾರ ಭದ್ರತಾ ಕಾಯ್ದೆಯನ್ನು ಜಾರಿಗೆ ತಂದಿದ್ದು ಯು.ಪಿ.ಎ ಸರ್ಕಾರದಲ್ಲಿ ಮನ್ ಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಎನ್ನುವುದನ್ನು ಮರೆಯುತ್ತಿದೆ ಎಂದರು. ಈ ಕಾಯ್ದೆ ಬದಿದ್ದರಿಂದ 5 ಕೆಜಿ ಅಕ್ಕಿ ಕೊಡುವುದು ಮುಂದುವರೆದಿದೆ. ಅಕ್ಕಿ ಕೊಡಿ ಎಂದು ಕೇಳಿದ್ದೇವೆ. ಅನ್ನಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿ ನೀಡುವುದಾಗಿ ಘೋಷಿಸಿದ್ದೇವೆ. ನಾವು ಕೊಟ್ಟೇ ಕೊಡುತ್ತೇವೆ. ಸ್ವಲ್ಪ ವಿಳಂಬವಾಗಬಹುದು ಅಷ್ಟೇ ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ.
