ಉದಯವಾಹಿನಿ, ಬೆಂಗಳೂರು: ಜಿಎಸ್‌ಟಿ ನೋಟಿಸ್ ಪಡೆದ ವರ್ತಕರಿಂದ 3 ವರ್ಷದ ತೆರಿಗೆ ಬಾಕಿ ವಸೂಲಾತಿ ಮಾಡುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.40 ಲಕ್ಷ ರೂ. ವ್ಯವಹಾರ ನಡೆಸಿದ್ದಕ್ಕೆ ರಾಜ್ಯ ಸರ್ಕಾರದ ವಾಣಿಜ್ಯ ತೆರಿಗೆ ಇಲಾಖೆಯ ವರ್ತಕರಿಗೆ ನೋಟಿಸ್ ಜಾರಿ ಮಾಡಿದ್ದಕ್ಕೆ ಭಾರೀ ಟೀಕೆ ವ್ಯಕ್ತವಾದ ಬೆನ್ನಲ್ಲೇ ಸಿದ್ದರಾಮಯ್ಯ ಇಂದು ತೆರಿಗೆ ಇಲಾಖೆಯ ಅಧಿಕಾರಿಗಳು, ವರ್ತಕ ಸಂಘದ ಪ್ರತಿನಿಧಿಗಳ ಜೊತೆ ಸಭೆ ನಡೆಸಿದರು. ಸಭೆಯ ಬಳಿಕ ಮಾತನಾಡಿ, ನೋಟಿಸ್ ನೀಡಿದ ವರ್ತಕರಿಂದ ಬಾಕಿ ತೆರಿಗೆಯನ್ನು ವಸೂಲಿ ಮಾಡುವುದಿಲ್ಲ. ಆದರೆ ವರ್ತಕರು ನೋಂದಣಿ ಮಾಡಿಕೊಳ್ಳಬೇಕು. ಈಗ ಕೊಟ್ಟಿರುವ ನೋಟೀಸ್ ಮೇಲೆ ವಸೂಲಾತಿ, ಕ್ರಮ ಕೈಗೊಳ್ಳುವುದಿಲ್ಲ ಎಂದು ಹೇಳಿದರು.
ಮೂರು ವರ್ಷಗಳ ಬಾಕಿ ವಸೂಲಾತಿಗೆ ನೋಟಿಸ್ ಕೊಟ್ಟಿದ್ರು, ಅದನ್ನ ಮುಂದುವರಿಸುವುದಿಲ್ಲ. ಕಡ್ಡಾಯ ಜಿಎಸ್‌ಟಿ ನೋಂದಣಿಗೆ ಒಪ್ಪಿದ್ದಾರೆ. ಜಿಎಸ್‌ಟಿ ಗೊಂದಲಕ್ಕೆ ಸಹಾಯವಾಣಿ ತೆರೆಯುತ್ತೇವೆ. ಜಿಎಸ್‌ಟಿ ಬಗ್ಗೆ ಜಾಗೃತಿ ಕಾರ್ಯಕ್ರಮಗಳು ಮಾಡಲು ತೀರ್ಮಾನ ಮಾಡಿದ್ದೇವೆ. ವರ್ತಕರು ಯುಪಿಐ ಬಳಸಲು ಒಪ್ಪಿಗೆ ನೀಡಿದ್ದಾರೆ ಎಂದು ತಿಳಿಸಿದರು.
