ಉದಯವಾಹಿನಿ, ಲಿಂಬೆ ನೀರಿನ ಆರೋಗ್ಯ ಲಾಭಗಳಿಗೆ ಹಿಂದಿನಿಂದಲೂ ಹಲವು ಪುರಾವೆಗಳಿವೆ. ಲಿಂಬೆಹಣ್ಣಿನಲ್ಲಿ ವಿಟಾಮಿನ್ ಸಿ ಮತ್ತು ಆ್ಯಂಟಿಆಕ್ಸಿಡಂಟ್ (ಉತ್ಕರ್ಷಣ ನಿರೋಧಕ)ಗಳಂತಹ ಪೋಷಕಾಂಶಗಳಿವೆಯಾದರೂ ಒಂದು ಲೋಟ ನೀರಿನಲ್ಲಿರುವ ಲಿಂಬೆರಸದ ಪ್ರಮಾಣವು ಅದು ಎಷ್ಟು ಕ್ಯಾಲರಿಗಳನ್ನು ಒಳಗೊಂಡಿದೆ ಎನ್ನುವುದನ್ನು ನಿರ್ಧರಿಸುತ್ತದೆ.
ಲಿಂಬೆ ಹಣ್ಣುಗಳು ಸಸ್ಯದ ಕಣಗಳಾದ ಪ್ಲೇವನಾಯ್ಡಗಳ ಮೂಲಗಳಾಗಿವೆ. ಪ್ಲೇವನಾಯ್ಡಗಳು ಉತ್ಕರ್ಷಣ ನಿರೋಧಕ ಮತ್ತು ಉರಿಯೂತ ನಿರೋಧಕ ಗುಣಗಳ ಜೊತೆಗೆ ಪ್ರಬಲ ಉತ್ಕರ್ಷಣ ನಿರೋಧಕವಾಗಿರುವ ವಿಟಾಮಿನ್ ಸಿ ಅನ್ನು ಹೊಂದಿವೆ. ಉತ್ಕರ್ಷಣ ನಿರೋಧಕಗಳು ಶರೀರದಲ್ಲಿನ ಆಕ್ಸಿಡೇಟಿವ್ (ಉತ್ಕರ್ಷಣಶೀಲ) ಒತ್ತಡದಿಂದ ಉಂಟಾಗುವ ಹಾನಿಕಾರಕ ಮತ್ತು ರೋಗಕಾರಕ ಫ್ರೀ ರ್ಯಾಡಿಕಲ್ಗಳನ್ನು ಸ್ವಚ್ಛಗೊಳಿಸುವ ಮೂಲಕ ಶರೀರದಲ್ಲಿಯ ವಿಷಯುಕ್ತ ಅಂಶಗಳನ್ನು ನಿವಾರಿಸಲು ನೆರವಾಗುತ್ತವೆ.
ಬೆಳಿಗ್ಗೆ ಲಿಂಬೆ ನೀರಿನ ಸೇವನೆಯು ಗ್ಯಾಸ್ಟಿಕ್ ಜ್ಯೂಸ್ (ಹೊಟ್ಟೆಯ ವಿವಿಧ ಗ್ರಂಥಿಗಳು ಸ್ರವಿಸುವ ಆಮ್ಲಯ ಜೀರ್ಣಕಾರಿ ದ್ರವಗಳ ಉತ್ಪಾದನೆಯನ್ನು ಉತ್ತೇಜಿಸುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸಲು ನೆರವಾಗುತ್ತದೆ.ಲಿಂಬೆ ಹಣ್ಣು ಮತ್ತು ಇತರ ಸಿಟ್ರಸ್ ಹಣ್ಣುಗಳು ಹಾನಿಕಾರಕ ಫ್ರೀ ರ್ಯಾಡಿಕಲ್ಗಳಿಂದ ಕೋಶಗಳಿಗೆ ರಕ್ಷಣೆ ನೀಡುವ ಪ್ರಮುಖ ಉತ್ಕರ್ಷಣ ನಿರೋಧಕ ವಿಟಾಮಿನ್ ಸಿ ಅನ್ನು ಸಮೃದ್ಧವಾಗಿ ಒಳಗೊಂಡಿರುತ್ತವೆ. ಅಲ್ಲದೆ ಶರೀರದಲ್ಲಿ ಹಾರ್ಮೋನ್ಗಳ ಉತ್ಪಾದನೆ, ಕಬ್ಬಿಣಾಂಶ ಹೀರುವಿಕೆ ಮತ್ತು ಕೊಲಾಜನ್ ಎಂಬ ಪ್ರೋಟೀನ್ನ ಸಂಶ್ಲೇಷಣೆಗೂ ವಿಟಾಮಿನ್ ಸಿ ನೆರವಾಗುತ್ತದೆ. ಲಿಂಬೆ ಹಣ್ಣಿನಲ್ಲಿ ಸಮೃದ್ಧವಾಗಿರುವ ವಿಟಾಮಿನ್ ಸಿ ಶರೀರದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಸಾಮಾನ್ಯ ಕಾಯಿಲೆಗಳ ವಿರುದ್ಧ ರಕ್ಷಣೆಯನ್ನು ನೀಡುತ್ತದೆ.
ಶರೀರದ ಹೈಡೇಷನ್ ಅಥವಾ ಜಲಸಂಚಯನದೊಂದಿಗೆ ದಿನವನ್ನು ಆರಂಭಿಸಲು ಲಿಂಬೆ ನೀರು ಉತ್ತಮ ಮಾರ್ಗವಾಗಿದೆ. ಶರೀರದಲ್ಲಿ ನೀರಿನ ಅಂಶವನ್ನು ಸೂಕ್ತವಾಗಿ ಕಾಯ್ದುಕೊಳ್ಳುವುದು ಒಟ್ಟಾರೆ ಆರೋಗ್ಯ ಮತ್ತು ಯೋಗಕ್ಷೇಮದಲ್ಲಿ ಪ್ರಮುಖ ಪಾತ್ರವನ್ನು ಹೊಂದಿದೆ. ಪ್ರತಿ ದಿನ ಸಾಕಷ್ಟು ನೀರನ್ನು ಸೇವಿಸುವುದು ಅತ್ಯಗತ್ಯವಾಗಿದೆ. ಸಾದಾ ನೀರು ಶರೀರದ ಒಟ್ಟಾರೆ ಆರೋಗ್ಯಕ್ಕೆ ವಿಶ್ವಾಸಾರ್ಹ ಮೂಲವಾಗಿದ್ದರೂ ಎಲ್ಲರೂ ಅದರ ರುಚಿಯನ್ನು ಇಷ್ಟಪಡುವುದಿಲ್ಲ. ನೀರು ಲಿಂಬೆ ಹಣ್ಣಿನ ಸುವಾಸನೆಯಿಂದ ಕೂಡಿದ್ದರೆ ನೀವು ಹೆಚ್ಚು ನೀರನ್ನು ಸೇವಿಸಿಬಹುದು.
