ಉದಯವಾಹಿನಿ, ಕಾಲಕ್ಕೆ ತಕ್ಕಂತೆ ತಿನ್ನಬೇಕು ಎನ್ನುವುದು ಅನುಭವದ ನುಡಿ. ಆಯಾ ಋತುಮಾನದಲ್ಲಿ ದೊರೆಯುವ ತರಕಾರಿ ಮತ್ತು ಹಣ್ಣುಗಳು ಯಾವತ್ತಿಗೂ ಶ್ರೇಷ್ಠ. ಬೇಸಿಗೆಯಲ್ಲಿ ಕಲ್ಲಂಗಡಿ, ಕರಬೂಜದಂಥ ನೀರಿರುವ ಹಣ್ಣುಗಳು ಹೆಚ್ಚಾಗಿ ದೊರೆತರೆ, ಚಳಿಗಾಲದಲ್ಲಿ ಸಂಕೀರ್ಣ ಪಿಷ್ಟಗಳು ಹೆಚ್ಚಿರುವ ಗಡ್ಡೆ ಗೆಣಸುಗಳು ಮತ್ತು ವಿಟಮಿನ್‌ ಸಿ ಹೆಚ್ಚಿರುವ ಫಲಗಳು ದೊರೆಯುತ್ತವೆ. ಈ ಕಾಲದಲ್ಲಿ ಸಹಜವಾಗಿ ದೊರೆಯುವ ಬೆಟ್ಟದ ನೆಲ್ಲಿಕಾಯಿ ಶ್ರೇಷ್ಠ ಮಟ್ಟದ್ದು ಎನ್ನಲಾಗುತ್ತದೆ. ನೆಲ್ಲಿಕಾಯಿ ) ಕೆಲವೊಮ್ಮೆ ವರ್ಷದ ಬೇರೆ ದಿನಗಳಲ್ಲಿ ದೊರೆತರೂ ಈ ಚಳಿಯ ಋತುವಿನಲ್ಲಿ ದೊರೆಯುವ ನೆಲ್ಲಿ ಕಾಯಿಯ ಪ್ರಯೋಜನ ಗಳೇನು ಮತ್ತು ಇದನ್ನು ಏಕೆ ಸೇವಿಸಬೇಕು ಎಂಬುದನ್ನು ತಿಳಿಯೋಣ.ವಿಟಮಿನ್‌ ಸಿ: ನೆಲ್ಲಿಕಾಯನ್ನು ಆದಷ್ಟೂ ತಾಜಾ ಮತ್ತು ಹಸಿಯಾಗಿಯೇ ಸೇವಿಸುವುದು ಸೂಕ್ತ. ಜ್ಯೂಸ್‌ ಇಲ್ಲವೇ ಪಾನಕ ಮಾಡಿ ಸವಿಯುವುದರಿಂದ ಹಿಡಿದು ಚಟ್ನಿ, ತಂಬುಳಿ, ಚಿತ್ರಾನ್ನ ಎಂದೆಲ್ಲಾ ಹಸಿಯಾಗಿ ಸೇವಿಸುವ ಆಯ್ಕೆಗಳನ್ನು ಹುಡುಕ ಬಹುದು. ಕಾರಣ, ಇದರಲ್ಲಿ ಅತಿ ಉತ್ಕೃಷ್ಟ ಪ್ರಮಾಣದಲ್ಲಿ ವಿಟಮಿನ್‌ ಸಿ ಲಭ್ಯವಿದೆ. ಈ ಸತ್ವವು ಬೇಯಿಸಿದಷ್ಟೂ ನಷ್ಟವಾಗಿ ಹೋಗುತ್ತದೆ. ಹಾಗಾಗಿ ನೆಲ್ಲಿಯಾಯನ್ನು ಹಸಿಯಾಗಿ ತಿನ್ನುವುದು ಒಳ್ಳೆಯದು. ದೇಹದ ಒಟ್ಟಾರೆ ಸ್ವಾಸ್ಥ್ಯಕ್ಕೆ ಅತ್ಯಂತ ಮಹತ್ವದ್ದು ಸಿ ಜೀವಸತ್ವ. ಚಳಿಗಾಲದಲ್ಲಿ ಕಾಡುವ ಹಲವು ರೀತಿಯ ಜ್ವರ, ನೆಗಡಿ, ಕೆಮ್ಮಿನಂಥ ಸೋಂಕುಗಳನ್ನು ದೂರ ಇರಿಸಲು ಇದರ ಸೇವನೆ ಪ್ರಯೋಜನಕಾರಿ.ಚಯಾಪಚಯ ಹೆಚ್ಚಳ: ಚಳಿಗಾಲದಲ್ಲಿ ತೂಕ ಹೆಚ್ಚುತ್ತದೆ ಎನ್ನುವ ಗೋಳು ಹಲವರದ್ದು. ಬೆಳಗಿನ ಖಾಲಿ ಹೊಟ್ಟೆಯಲ್ಲಿ ನೆಲ್ಲಿ ಕಾಯಿಯ ಜ್ಯೂಸ್‌ ಕುಡಿಯುವುದರಿಂದ ದೇಹದ ಚಯಾಪಚಯ ವನ್ನು ಹೆಚ್ಚಿಸಬಹುದು. ಪಚನ ಸುಲಭವಾಗಿ, ಸತ್ವಗಳನ್ನು ಹೀರಿಕೊಳ್ಳುವ ದೇಹದ ಸಾಮರ್ಥ್ಯವೂ ವೃದ್ಧಿಸುತ್ತದೆ. ಜೀರ್ಣಾಂಗಗಳ ಕಾರ್ಯವೂ ಹೆಚ್ಚಿ, ಉರಿದು ಹೋಗುವ ಕ್ಯಾಲರಿಗಳ ಪ್ರಮಾಣ ದ್ವಿಗುಣಗೊಳ್ಳುತ್ತದೆ. ತೂಕ ಏರುವುದು ಕಡಿಮೆಯಾಗುತ್ತದೆ. ಡಿಟಾಕ್ಸ್‌: ನೆಲ್ಲಿಕಾಯಿಯ ಬಳಕೆಯಿಂದ ಜೀರ್ಣಾಂಗಗಳನ್ನು ಶುದ್ಧಗೊಳಿಸಬಹುದು. ದೇಹದಲ್ಲಿನ ಕಶ್ಮಲಗಳನ್ನು ದೂರ ಮಾಡಿ, ಡಿಟಾಕ್ಸ್‌ ಮಾಡಬಹುದು. ಇದಕ್ಕಾಗಿ ಬೆಳಗಿನ ಖಾಲಿ ಹೊಟ್ಟೆಯಲ್ಲಿ ನೆಲ್ಲಿಕಾಯಿ ಸೇವನೆ ಒಳ್ಳೆಯ ಉಪಾಯ. ಜೊತೆಗೆ ಆಸಿಡಿಟಿ, ಅಜೀರ್ಣ, ಹೊಟ್ಟೆಯುಬ್ಬರದಂಥ ಸಮಸ್ಯೆಗಳಿಗೂ ಇದು ಪರಿಹಾರ ಒದಗಿಸುತ್ತದೆ.

Leave a Reply

Your email address will not be published. Required fields are marked *

error: Content is protected !!