ಉದಯವಾಹಿನಿ, ಬೆಂಗಳೂರು: ರೌಡಿಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ 5ನೇ ಆರೋಪಿಯಾಗಿರುವ ಮಾಜಿ ಸಚಿವ ಬೈರತಿ ಬಸವರಾಜ್ 2ನೇ ಬಾರಿಗೆ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಲಿದ್ದಾರೆ.ಈ ನಡುವೆ ತಮ್ಮ ವಿರುದ್ಧದ ಎಫ್‌ಐಆರ್ ರದ್ದು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ, ಇಂದಿಗೆ ಮುಂದೂಡಿಕೆ ಮಾಡಿತ್ತು. ಈಗಾಗಲೇ ಈ ಪ್ರಕರಣದಲ್ಲಿ ಹನ್ನೊಂದು ಜನ ಆರೋಪಿಗಳು ಅರೆಸ್ಟ್ ಆಗಿದ್ದು, ಇವರಲ್ಲಿ ಹಲವರು ಬೈರತಿ ಬಸವರಾಜ್‌ಗೆ ಆಪ್ತರು ಎನ್ನಲಾಗಿದೆ. ಆರೋಪಿಗಳ ವಿಚಾರಣೆಯಲ್ಲಿ ಸಿಕ್ಕ ಮಾಹಿತಿ ಆಧಾರದ ಮೇಲೆ ಪೊಲೀಸರು ವಿಚಾರಣೆ ನಡೆಸಲಿದ್ದಾರೆ. ನಡುವೆ ಜಗದೀಶ್ ಪತ್ತೆಯಾಗದ ಹಿನ್ನೆಲೆ ಇಂದು ಬೈರತಿ ಬಸವರಾಜ್ ರನ್ನು ಬಂಧಿಸುವ ಸಾಧ್ಯತೆ ಇಲ್ಲ ಎನ್ನಲಾಗಿದೆ.
ಸತತ ಮೂರುವರೆಗಂಟೆ ಗ್ರಿಲ್ :ಇನ್ನೂ ಕಳೆದ ಶನಿವಾರ ಭಾರತಿನಗರ ಪೊಲೀಸ್ ಠಾಣೆಗೆ ಹಾಜರಾಗಿದ್ದ ಮಾಜಿ ಸಚಿವ ಬೈರತಿ ಬಸವರಾಜ್ ಸತತ ಮೂರುವರೆಗಂಟೆಗಳ ಕಾಲ ವಿಚಾರನೆ ಎದುರಿಸಿದ್ದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, ಕೊಲೆ ಪ್ರಕರಣದಲ್ಲಿ ವಿಚಾರಣೆಗೆ ಕರೆದಿದ್ರು, ಪೊಲೀಸರು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದ್ದೀನಿ. ಇದರಲ್ಲಿ ನನ್ನ ಪಾತ್ರ ಇಲ್ಲ ಅಂತಾ ಹೇಳಿದ್ದೇನೆ. ನನಗೂ ಕೊಲೆಗೂ ಸಂಬಂಧವಿಲ್ಲ, ಯಾವ ಜಗ್ಗನೂ ನನಗೆ ಗೊತ್ತಿಲ್ಲ. ಬುಧವಾರ ಮತ್ತೆ ವಿಚಾರಣೆಗೆ ಬರಬೇಕೆಂದು ಹೇಳಿದ್ದಾರೆ. ಬರುತ್ತೇನೆ. ತನಿಖೆಗೆ ಎಲ್ಲ ರೀತಿಯಿಂದಲೂ ಸಹಕಾರ ಕೊಡುತ್ತೇನೆ ಎಂದು ಹೇಳಿದರು.
