ಉದಯವಾಹಿನಿ, ಚೀನಾ : ಮಧ್ಯಮ ಶ್ರೇಣಿ ಕ್ಷಿಪಣಿ, ಹೋವಿಟ್ಟರ್ ಫಿರಂಗಿ, ಡೋನ್‌ಗಳು ಸೇರಿದಂತೆ 10 ಶತಕೋಟಿ ಡಾಲರ್‌ಗೂ ಅಧಿಕ ಮೌಲ್ಯದ ಭಾರಿ ಶಸ್ತ್ರಾಸ್ತ್ರಗಳನ್ನು ತೈವಾನ್‌ಗೆ ಮಾರಾಟ ಮಾಡುವ ಬೃಹತ್ ಪ್ಯಾಕೇಜನ್ನು ಅಮೆರಿಕದ ಟ್ರಂಪ್ ಸರ್ಕಾರ ಘೋಷಿಸಿದೆ. ಈ ಪ್ಯಾಕೇಜ್‌ಗೆ ಚೀನಾ ಆಕ್ರೋಶ ವ್ಯಕ್ತಪಡಿಸಿದೆ.
ಬುಧವಾರ ರಾಷ್ಟ್ರೀಯ ವಾಹಿನಿಯಲ್ಲಿ ಅಧ್ಯಕ್ಷ ಟ್ರಂಪ್ ಅವರು ಮಾಡಿದ ಭಾಷಣದ ವೇಳೆ ಸರ್ಕಾರಿ ಇಲಾಖೆಯು ಶಸ್ತ್ರಾಸ್ತ್ರ ಮಾರಾಟದ ಘೋಷಣೆ ಮಾಡಿದೆ. ವಿದೇಶಾಂಗ ನೀತಿ ಬಗ್ಗೆ ಟ್ರಂಪ್ ಮಾತನಾಡಿದರೂ ಚೀನಾ ಅಥವಾ ತೈವಾನ್ ಬಗ್ಗೆ ಪ್ರಸ್ತಾಪ ಮಾಡಿರಲಿಲ್ಲ.
ವ್ಯಾಪಾರ ಮತ್ತು ಪ್ರತಿಸುಂಕ ವಿಚಾರ, ತೈವಾನ್ ಅನ್ನು ತನ್ನ ಪ್ರಮುಖ ಭೂಪ್ರದೇಶಕ್ಕೆ ಸೇರಿಸಿಕೊಳ್ಳುವ ಚೀನಾದ ಆಕ್ರಮಣಕಾರಿ ನಡೆಯು ಟ್ರಂಪ್ ಅವರ ಎರಡನೇ ಅವಧಿಯಲ್ಲಿ ಚೀನಾ ಮತ್ತು ಅಮೆರಿಕ ನಡುವೆ ಬಿಕ್ಕಟ್ಟುಗಳನ್ನು ಹೆಚ್ಚಿಸಿದೆ.
ಅಮೆರಿಕ ಸಂಸತ್ತು (ಕಾಂಗ್ರೆಸ್) ಪ್ಯಾಕೇಜ್‌ಗೆ ಸಮ್ಮತಿಸಿದರೆ ಇದು ತೈವಾನ್‌ಗೆ ಅಮೆರಿಕದ ಈವರೆಗಿನ ಬೃಹತ್ ಶಸ್ತ್ರಾಸ್ತ್ರ ಮಾರಾಟ ಪ್ಯಾಕೇಜ್ ಆಗಲಿದೆ. ಬೈಡನ್ ಆಡಳಿತದಲ್ಲಿ 8.4 ಶತಕೋಟಿ ಡಾಲರ್ ಪ್ಯಾಕೇಜ್ ನೀಡಲಾಗಿತ್ತು. ಚೀನಾ ವಾಗ್ದಾಳಿ: ಅಮೆರಿಕದ ಈ ನಡೆಗೆ ತೀವ್ರ ಆಕ್ರೋಶ ಹೊರ ಹಾಕಿರುವ ಚೀನಾ ವಿದೇಶಾಂಗ ಇಲಾಖೆಯು, “ಅಮೆರಿಕ ಮತ್ತು ಚೀನಾ ನಡುವಿನ ರಾಜತಾಂತ್ರಿಕ ಒಪ್ಪಂದವನ್ನು ಇದು ಉಲ್ಲಂಘಿಸುತ್ತದೆ. ಚೀನಾದ ಸಾರ್ವಭೌಮತೆ, ಸುರಕ್ಷತೆ, ಪ್ರಾದೇಶಿಕ ಸಮಗ್ರತೆಗೆ ಹಾನಿ ಉಂಟು ಮಾಡುತ್ತದೆ’ ಎಂದು ಹೇಳಿದೆ.
