ಉದಯವಾಹಿನಿ, ಡುಗಾಂಗ್ ಸ್ಮಶಾನ ಎಂದೇ ಕರೆಯಲಾಗುವ ಖತರ್‌ನ ನೈರುತ್ಯ ಮರುಭೂಮಿಯಲ್ಲಿ 21 ದಶಲಕ್ಷ ವರ್ಷಗಳ ಹಿಂದಿನ ಕಡಲ್‌ಕುದುರೆಯ ಪಳೆಯುಳಿಕೆ ಪತ್ತೆಯಾಗಿದೆ. ಮರಳಿನ ರಾಶಿಯಲ್ಲಿ ನಡೆದು ಸಾಗುತ್ತಿದ್ದಾಗ ದೂರ ದೂರಕ್ಕೂ ಮರಳೇ ಮರಳು. ಆಕಸ್ಮಿಕವಾಗಿ ಮೂಳೆಗಳ ರಾಶಿ ನಿಮ್ಮನ್ನು ಸ್ವಾಗತಿಸುತ್ತದೆ. ಕೆಲವು 50 ವರ್ಷಗಳ ಹಿಂದೆ ಖತರ್ ನ ನೈರುತ್ಯ ಮರುಭೂಮಿಯಲ್ಲಿ ನಡೆದು ಸಾಗುತ್ತಿದ್ದ ಭೂವಿಜ್ಞಾನಿಗಳಿಗೆ ಇಂತಹುದೇ ಅನುಭವವಾಗಿತ್ತು. ಅಲ್ ಮಝಾಬಿಯ ಪ್ರದೇಶದಲ್ಲಿ ಅವರು ಆಗ ಅನ್ವೇಷಿಸಿದ್ದ ಸರೀಸೃಪವನ್ನು ಪುರಾತನ ಸರೀಸೃಪಗಳ ಮತ್ತೊಂದು ಪಳೆಯುಳಿಕೆ ಎಂದುಕೊಂಡಿದ್ದರು.
ವರ್ಷಗಳ ನಂತರ, 2000ರಲ್ಲಿ ಖತರ್ ವಸ್ತುಸಂಗ್ರಹಾಲಯ ಮತ್ತು ಸ್ಮಿಥ್ ಸೊನಿಯನ್ ಸಂಸ್ಥೆಯ ವಿಜ್ಞಾನಿಗಳ ತಂಡವೊಂದು ಮತ್ತೊಮ್ಮೆ ಅದನ್ನು ಅಧ್ಯಯನ ಮಾಡಲು ನಿರ್ಧರಿಸಿತು. ಪ್ರದೇಶವನ್ನು ಪುನಃ ಪರಿಶೀಲಿಸಿ ಪಳೆಯುಳಿಕೆಯ ನಿಗೂಢತೆಯನ್ನು ಬಗೆಹರಿಸುವ ಉತ್ಸಾಹ ಅವರಲ್ಲಿತ್ತು. ಈ ಪ್ರದೇಶವನ್ನು ಈಗ ‘ಡುಗಾಂಗ್ ಸ್ಮಶಾನ’ ಎಂದು ಕರೆಯಲಾಗುತ್ತಿದೆ. ಹೊಸ ಪರೀಕ್ಷೆಯಲ್ಲಿ ಈ ವಿಶಾಲ ಪ್ರದೇಶವು 21 ದಶಲಕ್ಷ ವರ್ಷಗಳಷ್ಟು ಹಳೆಯದಾದ ಮೂಳೆಗಳ ರಾಶಿಯೆಂದು ತಿಳಿದುಬಂತು. ಕಡಲ್ ಕುದುರೆಗಳು, ಶಾರ್ಕ್ ಗಳು, ಬಾರಾಕುಡಾ ತರಹದ ಮೀನುಗಳು, ಇತಿಹಾಸಪೂರ್ವದ ಡಾಲ್ಪಿನ್‌ಗಳು ಹಾಗೂ ಕಡಲಾಮೆಗಳು ಇಲ್ಲಿ ಪತ್ತೆಯಾಗಿವೆ. 170ಕ್ಕೂ ಅಧಿಕ ಪಳೆಯುಳಿಕೆಗಳಿಂದ ಸಮೃದ್ಧವಾಗಿರುವ ಈ ಸ್ಥಳ ಜಗತ್ತಿನಲ್ಲೇ ಅತ್ಯಂತ ಶ್ರೀಮಂತ ಸಾಗರ ಜೀವಿಗಳ ಪಳೆಯುಳಿಕೆ ಪ್ರದೇಶವೆಂದು ಖ್ಯಾತಿ ಗಳಿಸಿದೆ. ಕೆಲವರು ಇದನ್ನು ಚಿಲಿಯ ಪ್ರಸಿದ್ಧ ‘ತಿಮಿಂಗಿಲ ಗುಡ್ಡೆ’ಯೊಂದಿಗೆ ಹೋಲಿಸಿದ್ದಾರೆ. ಅಲ್ಲಿ ಡಜನ್‌ಗಟ್ಟಲೆ ತಿಮಿಂಗಿಲಗಳ ಅಸ್ಥಿಪಂಜರಗಳು ದೊರೆತಿದ್ದವು.
ಇತ್ತೀಚೆಗೆ ಇದೇ ಪ್ರದೇಶದಲ್ಲಿ ಮತ್ತೊಂದು ಮಹತ್ವದ ಅನ್ವೇಷಣೆ ನಡೆದಿದೆ. ಪೀರ್‌ಜೆ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ‘ಸಾಲ್ವಾಸಿರೆನ್ ಕತಾರೆನ್ಸಿಸ್ ಎಂಬ ಹೊಸ ಪ್ರಭೇದದ ಕಡಲ್ ಕುದುರೆ ಪತ್ತೆಯಾಗಿದೆ. ಈ ಪ್ರಾಣಿ ಡಗಾಂಗ್ ಗಳಂತೆ ಕಾಣಿಸಿಕೊಂಡರೂ ಕೆಲವು ಮಹತ್ವದ ವ್ಯತ್ಯಾಸಗಳನ್ನು ಹೊಂದಿದೆ.
ಡಗಾಂಗ್‌ಗಳು ಇಂದಿಗೂ ಈ ಪ್ರದೇಶದಿಂದ ಸುಮಾರು 10 ಮೈಲು ದೂರದ ಸಮುದ್ರ ಪ್ರದೇಶದಲ್ಲಿ ವಾಸಿಸುತ್ತಿವೆ.
