ಉದಯವಾಹಿನಿ, ರಾಮನಗರ: ಗ್ರಾಮ ಪಂಚಾಯತ್‌ ಸದಸ್ಯೆಯೊಬ್ಬಳು ತನ್ನ ಅನೈತಿಕ ಸಂಬಂಧದ ಪೋಷಣೆಗಾಗಿ ಸುಪಾರಿ ಕೊಟ್ಟು ಗಂಡನನ್ನೇ ಕೊಲ್ಲಿಸಿದ ಹಾಗೂ ಅದನ್ನು ಆತ್ಮಹತ್ಯೆ ಎಂದು ಬಿಂಬಿಸಿದ ಘಟನೆ ನಡೆದಿದೆ. ಇಷ್ಟಲ್ಲದೆ, ಗಂಡ ಸಾವಿನ ಬಳಿಕ ಪತ್ರಿಕಾಗೋಷ್ಠಿಯನ್ನೂ ನಡೆಸಿದ ಈಕೆ, ಗಂಡನ ಸಾವು ಅನುಮಾನಾಸ್ಪದವಾಗಿದೆ ಎಂದೂ ಹೇಳಿದ್ದಳು. ಇದೀಗ ಪೊಲೀಸರು ಪ್ರಕರಣವನ್ನು ಭೇದಿಸಿದ್ದು, ಪತ್ನಿಯನ್ನು ಕಂಬಿಗಳ ಹಿಂದೆ ಕಳಿಸಿದ್ದಾರೆ. ಚನ್ನಪಟ್ಟಣದಲ್ಲಿ ಘಟನೆ ನಡೆದಿದೆ.
ವಿಷ ಕುಡಿದು ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪೊಲೀಸರ ತನಿಖೆಯಲ್ಲಿ ಇದು ಆತ್ಮಹತ್ಯೆ ಅಲ್ಲ, ಕೊಲೆ ಎಂದು ತಿಳಿದು ಬಂದಿದ್ದು, ಪತ್ನಿಯ ಅನೈತಿಕ ಸಂಬಂಧಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಗಂಡನನ್ನೇ ಸುಪಾರಿ ಕೊಟ್ಟು ಗ್ರಾ.ಪಂ ಸದಸ್ಯೆ ಕೊಲೆ ಮಾಡಿಸಿರುವುದು ಬೆಳಕಿಗೆ ಬಂದಿದೆ.

ಜೂ.24ರಂದು ಚನ್ನಪಟ್ಟಣ ತಾಲೂಕಿನ ಕೃಷ್ಣಾಪುರದೊಡ್ಡಿ ಗ್ರಾಮದಲ್ಲಿ ಗ್ರಾ.ಪಂ ಸದಸ್ಯೆ ಚಂದ್ರಕಲಾ ಪತಿ ಲೋಕೇಶ್ (45) ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಲೋಕೇಶ್ ಶವದ ಬಳಿ ವಿಷದ ಬಾಟಲಿ ಇಟ್ಟು, ಸೂಸೈಡ್ ಎಂದು ಬಿಂಬಿಸಲಾಗಿತ್ತು. ಈ ಸಂಬಂಧ ಎಂ.ಕೆ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬಳಿಕ ಚಂದ್ರಕಲಾ ತಾನೇ ಸುದ್ದಿಗೋಷ್ಠಿ ನಡೆಸಿ, ಪತಿಯ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಳು. ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ಚಂದ್ರಕಲಾ ಫೋನ್‌ನಿಂದ ಆಕೆಯ ಅನೈತಿಕ ಸಂಬಂಧದ ಮಹತ್ವದ ಸುಳಿವು ಸಿಕ್ಕಿತ್ತು. ಯೋಗೇಶ್ ಎಂಬಾತನೊಂದಿಗೆ ಚಂದ್ರಕಲಾ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು. ಇದಕ್ಕೆ ಪತಿ ಅಡ್ಡಿಯಾಗಿದ್ದ ಹಿನ್ನೆಲೆಯಲ್ಲಿ ಪ್ರಿಯಕರನ ಜೊತೆ ಸೇರಿ ಗಂಡ ಕೊಲೆಗೆ ಸ್ಕೆಚ್ ಹಾಕಿದ್ದಳು. ಬೆಂಗಳೂರಿನ ನಾಲ್ವರು ಸುಪಾರಿ ಕಿಲ್ಲರ್‌ಗಳಿಗೆ ಹಣ ಕೊಟ್ಟು ಪತಿಯ ಕೊಲೆ ಮಾಡಿಸಿರುವುದು ತನಿಖೆ ವೇಳೆ ಬಯಲಾಗಿದೆ. ಸದ್ಯ ಎಂ.ಕೆ.ದೊಡ್ಡಿ ಪೊಲೀಸರು ಗ್ರಾ.ಪಂ ಸದಸ್ಯೆ ಚಂದ್ರಕಲಾಳನ್ನು ಬಂಧಿಸಿದ್ದು, ಉಳಿದ ಆರೋಪಿಗಳ ಸೆರೆಗೆ ಬಲೆ ಬೀಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!