ಉದಯವಾಹಿನಿ, ಜಬಲ್ಪುರ: ಆಟೋರಿಕ್ಷಾದೊಳಗೆ ಕುದುರೆ ಸಿಲುಕಿಕೊಂಡಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಅಯ್ಯೋ, ಇದೇನಿದು ಕುದುರೆಯನ್ನು ಆಟೋರಿಕ್ಷಾದೊಳಗೆ ತುಂಬಿಸಿ ಕರೆದುಕೊಂಡು ಹೋಗಲಾಗುತ್ತಿದೆಯೇ ಎಂದು ಗೊಂದಲಕ್ಕೊಳಗಾಗಬೇಡಿ. ಎರಡು ಕುದುರೆಗಳು ಪರಸ್ಪರ ಕಾದಾಟ ಮಾಡಿಕೊಂಡಾಗ ಈ ಘಟನೆ ನಡೆದಿದೆ. ಇದೀಗ, ಆಟೋರಿಕ್ಷಾದೊಳಗೆ ಕುದುರೆ ಸಿಲುಕಿಕೊಂಡಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ವರದಿಗಳ ಪ್ರಕಾರ, ಈ ಘಟನೆ ಮಧ್ಯಪ್ರದೇಶದ ಜಬಲ್ಪುರದಲ್ಲಿ ನಡೆದಿದೆ. ಜಬಲ್ಪುರದ ನಗರ್ತ್ ಚೌಕ್‌ನಲ್ಲಿ ಎರಡು ಕುದುರೆಗಳು ಪರಸ್ಪರ ಕಾದಾಟ ಪ್ರಾರಂಭಿಸಿದವು. ಜನರು ಕುದುರೆಗಳನ್ನು ಓಡಿಸಲು ಸಾಕಷ್ಟು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಕಾದಾಟವಾಡುತ್ತ, ಕುದುರೆಗಳು ಶೋ ರೂಂಗೆ ಪ್ರವೇಶಿಸಿದವು, ಈ ಸಮಯದಲ್ಲಿ ಶೋ ರೂಂ ಅನ್ನು ಧ್ವಂಸಗೊಳಿಸಿವೆ. ಇದಾದ ನಂತರ, ಕುದುರೆಗಳು ಕಾದಾಡುತ್ತಾ ರಸ್ತೆಗೆ ಬಂದವು. ಈ ವೇಳೆ ಪ್ರಯಾಣಿಕರನ್ನು ತುಂಬಿದ್ದ ಇ-ರಿಕ್ಷಾವೊಂದು ರಸ್ತೆಯಲ್ಲಿ ಹಾದುಹೋಗುತ್ತಿತ್ತು. ಅದೇ ಸಮಯದಲ್ಲಿ ರಸ್ತೆಯಲ್ಲಿ ಕಾದಾಟ ನಡೆಸುತ್ತಿದ್ದ ಕುದುರೆ ನೇರವಾಗಿ ಆಟೋರಿಕ್ಷಾದೊಳಗೆ ನುಗ್ಗಿದೆ.
ಕುದುರೆ ಇ-ರಿಕ್ಷಾದೊಳಗೆ ಪ್ರವೇಶಿಸಿದ ಕಾರಣ, ಚಾಲಕ ಸೇರಿದಂತೆ ಇಬ್ಬರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬಹಳ ಪ್ರಯತ್ನದ ನಂತರ, ಜನರು ಕುದುರೆಯನ್ನು ಆಟೋದಿಂದ ಹೊರತರುವಲ್ಲಿ ಯಶಸ್ವಿಯಾದರು.ಇನ್ನು ಈ ಘಟನೆಯ ನಂತರ ಬೆಚ್ಚಿಬಿದ್ದ ಸ್ಥಳೀಯರು, ಪ್ರಾಣಿಗಳನ್ನು ಈ ರೀತಿ ಮುಕ್ತವಾಗಿ ತಿರುಗಾಡಲು ಬಿಡಬಾರದು ಎಂದು ಸ್ಥಳೀಯ ಆಡಳಿತವನ್ನು ಒತ್ತಾಯಿಸಿದ್ದಾರೆ. ಅವುಗಳನ್ನು ಸುತ್ತಾಡಲು ಬಿಡುವುದರಿಂದ ಅಪಘಾತಗಳ ಸಾಧ್ಯತೆ ಹೆಚ್ಚಾಗುತ್ತದೆ. ಇದರಿಂದ ಜನರು ತೊಂದರೆ ಅನುಭವಿಸುವಂತಾಗುತ್ತದೆ ಎಂದು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!