ಉದಯವಾಹಿನಿ, 2025 ರ ಏಷ್ಯಾಕಪ್ ನಡೆಯುವ ಬಗ್ಗೆ ಇದುವರೆಗೆ ಇದ್ದ ಎಲ್ಲಾ ಊಹಪೋಹಗಳಿಗೆ ಭಾಗಶಃ ತೆರೆ ಬಿದ್ದಿದೆ. ಡಾಕಾದಲ್ಲಿ ನಡೆದ ಎಸಿಸಿ ಸಭೆಯಲ್ಲಿ ಏಷ್ಯಾಕಪ್ ಆಯೋಜನೆಯ ಕುರಿತು ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವರದಿಯಾಗಿದೆ. ಅದರಂತೆ ಸೆಪ್ಟೆಂಬರ್ ತಿಂಗಳಲ್ಲಿ ಏಷ್ಯಾಕಪ್ ನಡೆಯಲ್ಲಿದ್ದು, ಈ ಟೂರ್ನಿಗೆ ಯುಎಇ ಆತಿಥ್ಯವಹಿಸಲಿದೆ ಎಂದು ತಿಳಿದುಬಂದಿದೆ. ಈ ಮೊದಲೇ ನಿರ್ಧರಿಸಿದಂತೆ ಈ ಟೂರ್ನಿಯ ಆತಿಥ್ಯದ ಹಕ್ಕು ಬಿಸಿಸಿಐ (BCCI) ಬಳಿಯೇ ಇರಲಿದೆ. ಇದೀಗ ಈ ಟೂರ್ನಿಯ ವೇಳಾಪಟ್ಟಿಯ ಬಗ್ಗೆ ಮಹತ್ವದ ಸುದ್ದಿಯೊಂದು ಹೊರಬಿದಿದ್ದು, ಭಾರತ ಹಾಗೂ ಪಾಕಿಸ್ತಾನ ತಂಡಗಳು ಒಂದೇ ಗುಂಪಿನಲ್ಲಿರಲಿವೆ ಎಂದು ವರದಿಯಾಗಿದೆ. ಇದು ನಿಜವಾದರೆ ಭಾರತ ಮತ್ತು ಪಾಕಿಸ್ತಾನ ನಡುವೆ ಮೂರು ಪಂದ್ಯಗಳು ನಡೆಯುವ ಸಾಧ್ಯತೆಗಳಿವೆ.
ಎರಡೂ ತಂಡಗಳು ಒಂದೇ ಗುಂಪಿನಲ್ಲಿ?: ಮೇಲೆ ಹೇಳಿದಂತೆ ಎಂದಿನಂತೆ ಈ ಬಾರಿಯೂ ಭಾರತ ಮತ್ತು ಪಾಕಿಸ್ತಾನ ಒಂದೇ ಗುಂಪಿನಲ್ಲಿರಬಹುದು. ಇದು ನಿಜವಾಗಿದ್ದರೆ, ಈ ಎರಡೂ ತಂಡಗಳು ಏಷ್ಯಾಕಪ್ 2025 ರಲ್ಲಿ ಮೂರು ಬಾರಿ ಪರಸ್ಪರ ಮುಖಾಮುಖಿಯಾಗಬಹುದು. ಏಕೆಂದರೆ ಎರಡೂ ತಂಡಗಳು ಗುಂಪು ಹಂತದಲ್ಲಿ ಪರಸ್ಪರ ಒಂದು ಪಂದ್ಯವನ್ನು ಆಡುತ್ತವೆ. ಇದರ ನಂತರ, ಸೂಪರ್ ಸಿಕ್ಸ್‌ನಲ್ಲಿಯೂ ಪರಸ್ಪರ ಮುಖಾಮುಖಿಯಾಗಬಹುದು. ಈ ಟೂರ್ನಮೆಂಟ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ಉತ್ತಮ ಪ್ರದರ್ಶನ ನೀಡಿ ಫೈನಲ್‌ನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡರೆ, ಫೈನಲ್‌ನಲ್ಲಿಯೂ ಪರಸ್ಪರ ಎದುರುಬದುರಾಗಲಿವೆ.
ಭಾರತ- ಪಾಕ್ ಕೊನೆಯ ಮುಖಾಮುಖಿ: ಭಾರತ ಮತ್ತು ಪಾಕಿಸ್ತಾನ ತಂಡಗಳು ಕೊನೆಯದಾಗಿ 2025 ರ ಚಾಂಪಿಯನ್ಸ್ ಟ್ರೋಫಿಯ ಗುಂಪು ಹಂತದಲ್ಲಿ ದುಬೈನಲ್ಲಿ ಪಂದ್ಯವನ್ನು ಆಡಿದ್ದವು. ಈ ಪಂದ್ಯಾವಳಿಯನ್ನು ಈ ಹಿಂದೆ ಪಾಕಿಸ್ತಾನದಲ್ಲಿ ಆಯೋಜಿಸಲು ನಿರ್ಧರಿಸಲಾಗಿತ್ತು. ಆದರೆ ಟೀಂ ಇಂಡಿಯಾವನ್ನು ಪಾಕಿಸ್ತಾನಕ್ಕೆ ಕಳುಹಿಸಲು ಬಿಸಿಸಿಐ ನಿರಾಕರಿಸಿತು. ನಂತರ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿಯನ್ನು ಆಯೋಜಿಸಲಾಯಿತು. ಅದರಂತೆ ಭಾರತದ ಪಂದ್ಯಗಳು ದುಬೈನಲ್ಲಿ ನಡೆದಿದ್ದವು. ಈ ಟೂರ್ನಿಯನ್ನು ಗೆದ್ದುಕೊಳ್ಳುವಲ್ಲಿ ಭಾರತ ಯಶಸ್ವಿಯಾಗಿತ್ತು.
