
ಉದಯವಾಹಿನಿ, ಢಾಕಾ: ಬಾಂಗ್ಲಾದೇಶದ ಮೊಹಮ್ಮದ್ ಯೂನುಸ್ ಆಡಳಿತದಲ್ಲಿ ಮಹಿಳೆಯರ ಬಟ್ಟೆಯ ಮೇಲಿನ ನಿರ್ಬಂಧ ಮತ್ತು ಸರ್ಕಾರದ ವಿರುದ್ಧ ಪ್ರತಿಭಟಿಸುವ ಸಿಬ್ಬಂದಿಯ ಹಕ್ಕನ್ನು ಕಿತ್ತುಕೊಂಡ ಆದೇಶವು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ಬೆಳವಣಿಗೆಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆಗೆ ಗುರಿಯಾಗಿದ್ದು, ಕೆಲವರು ಇದನ್ನು ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತದ ಆದೇಶಗಳಿಗೆ ಹೋಲಿಸಿದ್ದಾರೆ.
ಈ ವಾರದ ಆರಂಭದಲ್ಲಿ, ಬಾಂಗ್ಲಾದೇಶ ಬ್ಯಾಂಕ್ ಮಹಿಳಾ ಉದ್ಯೋಗಿಗಳಿಗೆ ಚಿಕ್ಕ ಉಡುಪು, ಕಿರು ತೋಳಿನ ಬಟ್ಟೆ, ಮತ್ತು ಲೆಗ್ಗಿಂಗ್ಸ್ ಧರಿಸುವುದನ್ನು ನಿಷೇಧಿಸಿತು, ಸೀರೆ ಅಥವಾ ಸಲ್ವಾರ್ ಕಮೀಜ್ ಧರಿಸುವಂತೆ ಸೂಚಿಸಿತು. ಹಿಜಾಬ್ ಮತ್ತು ಫಾರ್ಮಲ್ ಶೂಸ್ ಧರಿಸುವಂತೆಯೂ ಆದೇಶಿಸಲಾಗಿತ್ತು. ಪುರುಷರಿಗೆ ಜೀನ್ಸ್ ಮತ್ತು ಚಿನೋ ಪ್ಯಾಂಟ್‌ಗಳನ್ನು ನಿಷೇಧಿಸಲಾಗಿತ್ತು. ಈ ನಿಯಮಗಳನ್ನು ಪಾಲಿಸದಿದ್ದರೆ ಶಿಕ್ಷಾಕ್ರಮ ಕೈಗೊಳ್ಳಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿತ್ತು.ಈ ಆದೇಶವು ರಾತ್ರೋರಾತ್ರಿ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಯಿತು. ಸಾಮಾಜಿಕ ಜಾಲತಾಣದಲ್ಲಿ ಸರ್ಕಾರವನ್ನು “ದಬ್ಬಾಳಿಕೆ” ಎಂದು ಟೀಕಿಸಲಾಯಿತು “ತಾಲಿಬಾನ್ ಶೈಲಿಯ ಆಡಳಿತ ಎಂದು ಕರೆಯಲಾಯಿತು”. ಬಾಂಗ್ಲಾದೇಶ ಮಹಿಳಾ ಪರಿಷತ್‌ನ ಅಧ್ಯಕ್ಷೆ ಫೌಜಿಯಾ ಮೊಸ್ಲೇಮ್, “ಈ ಆದೇಶವು ಒಂದು ನಿರ್ದಿಷ್ಟ ಸಾಂಸ್ಕೃತಿಕ ವಾತಾವರಣವನ್ನು ರೂಪಿಸುವ ಪ್ರಯತ್ನವನ್ನು ಪ್ರತಿಬಿಂಬಿಸುತ್ತದೆ” ಎಂದು ಸ್ಥಳೀಯ ಮಾಧ್ಯಮಕ್ಕೆ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣದ ಆಕ್ರೋಶದ ಬಳಿಕ, ಬಾಂಗ್ಲಾದೇಶ ಬ್ಯಾಂಕ್ ಗುರುವಾರ ಈ ಆದೇಶವನ್ನು ಹಿಂಪಡೆಯಿತು. “ಇದು ಕೇವಲ ಸಲಹಾತ್ಮಕವಾಗಿದ್ದು, ಹಿಜಾಬ್ ಅಥವಾ ಬುರ್ಖಾ ಧರಿಸುವ ಕುರಿತು ಯಾವುದೇ ಕಡ್ಡಾಯವಿಲ್ಲ” ಎಂದು ವಕ್ತಾರ ಅರಿಫ್ ಹೊಸೈನ್ ಖಾನ್ ತಿಳಿಸಿದ್ದಾರೆ.
