ಉದಯವಾಹಿನಿ, ಹಾರೋಹಳ್ಳಿ: ಮಗನ ಸಾವಿನಿಂದ ಮನನೊಂದ ತಾಯಿಯೊಬ್ಬರು ಮಗನ ಹನ್ನೊಂದನೇ ದಿನದ ತಿಥಿ ಕಾರ್ಯದ ದಿನವೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಪಟ್ಟಣದ ಜನತಾ ಕಾಲೋನಿಯಲ್ಲಿ ನಡೆದಿದೆ. ಹೊಂಬಮ್ಮ (55) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಪುತ್ರ ಮೋಹನ್‌ಕುಮಾರ್(26) ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಬಳಿ ಆತ್ಮಹತ್ಯೆ ಮಾಡಿಕೊಂಡಿದ್ದ. ಐ.ಎ.ಎಸ್ ಪರೀಕ್ಷೆ ಬರೆದು, ಉನ್ನತ ಹುದ್ದೆಗೆ ತೆರಳುವ ಕನಸು ಕಾಣುತ್ತಿದ್ದ ತಾಯಿಗೆ ಮಗನ ಸಾವು ಆಘಾತವನ್ನು ಉಂಟು ಮಾಡಿದೆ. ನೋವನ್ನು ತಾಳಲಾರದೆ ದುಃಖದಲ್ಲಿಯೇ ಕಾಲ ಕಳೆಯುತ್ತಿದ್ದರು.
ಮಗನ ಸಾವಿನಿಂದ ಮನನೊಂದು ಮಗನ ತಿಥಿ ಕಾರ್ಯದಂದೇ ಮನೆಯ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಾರೋಹಳ್ಳಿ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
