ಉದಯವಾಹಿನಿ, ವಾಷಿಂಗ್ಟನ್: ಅಮೆರಿಕದಲ್ಲಿ ಯುವಕನೋರ್ವ ಸಾರ್ವಜನಿಕ ಸ್ಥಳದಲ್ಲಿ ಏಕಾಏಕಿ ಚಾಕುವಿನಿಂದ ದಾಳಿ ನಡೆಸಿದ್ದು, ಬರೋಬ್ಬರಿ 11 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಟ್ರಾವರ್ಸ್ ಸಿಟಿಯ ವಾಲ್ಮಾರ್ಟ್‌ನಲ್ಲಿ ಈ ಘಟನೆ ನಡೆದಿದ್ದು, ಇರಿತಕ್ಕೊಳಗಾದ ನಂತರ ಕನಿಷ್ಠ 11 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಧಿಕಾರಿಗಳು ಒಬ್ಬ ಶಂಕಿತನನ್ನು ವಶಕ್ಕೆ ಪಡೆದಿದ್ದಾರೆ. ಉತ್ತರ ಮಿಚಿಗನ್‌ನ ಅತಿದೊಡ್ಡ ಆರೋಗ್ಯ ರಕ್ಷಣಾ ವ್ಯವಸ್ಥೆಯಾದ ಮುನ್ಸನ್ ಹೆಲ್ತ್‌ಕೇರ್‌ಗೆ ಘಟನೆಯ ಬಗ್ಗೆ ಮಾಹಿತಿ ನೀಡಲಾಯಿತು ಮತ್ತು 11 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಅವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.
ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗಿದೆ. ಕೆಂಪು ಶರ್ಟ್ ಧರಿಸಿದ ವ್ಯಕ್ತಿ ವಾಲ್ಮಾರ್ಟ್‌ನಲ್ಲಿ ಜನರಿಗೆ ಚಾಕುವಿನಿಂದ ಇರಿಯುತ್ತಿರುವ ದೃಶ್ಯ ಕಂಡು ಬಂದಿದೆ. ತಕ್ಷಣ ಅಲ್ಲೇ ಇದ್ದ ವ್ಯಕ್ತಿಯೋರ್ವ ತಕ್ಷಣ ಅವನನ್ನು ಹೊಡೆದು ಕೈಯಲ್ಲಿದ್ದ ಚಾಕುವನ್ನು ಕಿತ್ತೆಸೆದ. ಅಲ್ಲದೇ ಆತನನ್ನು ಚೆನ್ನಾಗಿ ಥಳಿಸಿದ. ಇನ್ನು ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಆತನೋರ್ವ ವಿದೇಶಿ ಯುವಕ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ.
