ಉದಯವಾಹಿನಿ,ಇಸ್ರೇಲ್ : ವಿದೇಶಾಂಗ ಸಚಿವ ಎಸ್. ಜೈಶಂಕರ್ ಜೇರುಸೆಲಂನಲ್ಲಿ ಬುಧವಾರ ಸಂಜೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಭೇಟಿ ಮಾಡಿದ್ದು, ತಂತ್ರಜ್ಞಾನ, ಆರ್ಥಿಕತೆ, ಸಂಪರ್ಕ ಮತ್ತು ಭದ್ರತೆಯಲ್ಲಿ ಸಹಕಾರವನ್ನು ಹೆಚ್ಚಿಸುವ ಮಾರ್ಗಗಳ ಕುರಿತು ಚರ್ಚೆ ನಡೆಸಿದರು. ದ್ವಿಪಕ್ಷೀಯ ಕಾರ್ಯತಂತ್ರದ ಪಾಲುದಾರಿಕೆ ಸದೃಢವಾಗಿ ಬೆಳೆಯಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಈ ಕುರಿತು ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಜೇರುಸೆಲಂನಲ್ಲಿ ಬುಧವಾರ ಸಂಜೆ ಭೇಟಿ ಮಾಡಲಾಯಿತು. ಪ್ರಧಾನಿ ಮೋದಿ ಅವರಿಗೆ ಶುಭಾಶಯ ತಿಳಿಸಿದರು. ತಂತ್ರಜ್ಞಾನ, ಆರ್ಥಿಕತೆ, ಕೌಶಲ್ಯ ಮತ್ತು ಪ್ರತಿಭೆ, ಸಂಪರ್ಕ ಮತ್ತು ಭದ್ರತೆಯ ಸಹಕಾರದ ಕುರಿತು ಆಳವಾದ ಚರ್ಚೆ ನಡೆಸಲಾಯಿತು.
ಪ್ರಾದೇಶಿಕ ಮತ್ತು ಜಾಗತಿಕ ಅಭಿವೃದ್ಧಿಯ ಕುರಿತು ಪರಸ್ಪರ ದೃಷ್ಟಿಕೋನಗಳನ್ನು ಹಂಚಿಕೊಳ್ಳಲಾಯಿತು. ಈ ದ್ವಿಪಕ್ಷೀಯ ಸಂಬಂಧವು ಮತ್ತಷ್ಟು ಬಲವಾಗುವ ಕುರಿತು ವಿಶ್ವಾಸ ವ್ಯಕ್ತಪಡಿಸಲಾಯಿತು ಎಂದರು. ಭೇಟಿ ಕುರಿತು ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ನೆತನ್ಯಾಹು, ಈ ಸಂಜೆ ಜೇರುಸೆಲಂನ ನನ್ನ ಕಚೇರಿಯಲ್ಲಿ ಭಾರತದ ವಿದೇಶಾಂಗ ಸಚಿವ ಡಾ. ಸುಬ್ರಮಣ್ಯಂ ಜೈಶಂಕರ್ ಅವರನ್ನು ಭೇಟಿಯಾದೆ ಎಂದು ತಿಳಿಸಿದ್ದಾರೆ.
