ಉದಯವಾಹಿನಿ, ಬೆಂಗಳೂರು : ಸಿಂಥೆಟಿಕ್ ಡ್ರಗ್ಸ್ ಎಂಡಿಎಂಎ ತಯಾರಿಕಾ ಘಟಕ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಪತ್ತೆಯಾಗಿದ್ದು, ಕೋಟ್ಯಂತರ ರೂ. ಬೆಲೆಯ ಮಾದಕ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.ಕೋಟ್ಯಂತರ ರೂ. ಮೌಲ್ಯದ ಎಂಡಿಎಂಎ ಹಾಗೂ ಅದರ ತಯಾರಿಕೆಗೆ ಬಳಕೆ ಮಾಡಲು ಸಂಗ್ರಹಿಸಿಟ್ಟಿದ್ದ ಕಚ್ಚಾ ಸರಕುಗಳನ್ನು ಮೈಸೂರು ಪೊಲೀಸರ ಸಹಯೋಗದಲ್ಲಿ ಮಹಾರಾಷ್ಟ್ರ ಪೊಲೀಸರು ಪತ್ತೆ ಹಚ್ಚಿದ್ದಾರೆ.ಕರ್ನಾಟಕವನ್ನು ಮಾದಕ ವ್ಯಸನ ಮುಕ್ತ ರಾಜ್ಯ ಮಾಡುವುದಾಗಿ ಪಣತೊಟ್ಟು ರಾಜ್ಯ ಪೊಲೀಸರು 2020ರಿಂದಲೂ ಸಮಾರೋಪಾದಿಯ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಮಾದಕ ವಸ್ತುಗಳ ಸರಬರಾಜು ಹಾಗೂ ಮಾರಾಟದ ಮೇಲೆ ರಾಜ್ಯ ಪೊಲೀಸರು ತೀವ್ರ ನಿಗಾ ಇರಿಸಿದ್ದಾರೆ. ಪದೇಪದೇ ಕಾರ್ಯ ನಡೆಸಿ, ಆರೋಪಿಗಳನ್ನು ಬಂಧಿಸಿ ಮಾದಕ ವಸ್ತುಗಳನ್ನು ಜಪ್ತಿ ಮಾಡುತ್ತಿರುತ್ತಾರೆ.ಈ ನಡುವೆಯೂ ಸಿದ್ದರಾಮಯ್ಯ ಅವರ ತವರೂರು ಮೈಸೂರಿನಲ್ಲಿ ಸಿಂಥೆಟಿಕ್‌ಡ್ರಗ್ ತಯಾರಿಕಾ ಘಟಕ ಪತ್ತೆಯಾಗಿರುವುದು ಮತ್ತು ಇಲ್ಲಿಂದ ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಿಗೆ ಎಂಡಿಎಂಎ ಸರಬರಾಜು ಮಾಡುತ್ತಿರುವುದು ಬೆಚ್ಚಿಬೀಳುವಂತೆ ಮಾಡಿದೆ. ಮೈಸೂರಿನ ರಿಂಗ್‌ರಸ್ತೆಯಲ್ಲಿ ಎಂಡಿಎಂಎ ತಯಾರಿಕಾ ಘಟಕವನ್ನು ಮಹಾರಾಷ್ಟ್ರದ ಪೊಲೀಸರು ಪತ್ತೆ ಹಚ್ಚಿ ದಾಳಿ ನಡೆಸಿ ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
