ಉದಯವಾಹಿನಿ, ದುಬೈ: ಇತ್ತೀಚೆಗೆ ಮುಕ್ತಾಯಗೊಂಡ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಇಂಗ್ಲೆಂಡ್ ತಂಡದ ನಾಯಕಿ ನ್ಯಾಟ್ ಸಿವರ್-ಬ್ರಂಟ್(Nat ಐಸಿಸಿ ಮಹಿಳಾ ಏಕದಿನ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಭಾರತದ ಸ್ಮೃತಿ ಮಂಧಾನ ಅವರನ್ನು ಹಿಂದಿಕ್ಕಿ ಮತ್ತೆ ನಂ. 1 ಸ್ಥಾನವನ್ನು ಪಡೆದಿದ್ದಾರೆ. 28 ವರ್ಷದ ಸ್ಮೃತಿ ಈಗ 728 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.
ಶ್ರೀಲಂಕಾದಲ್ಲಿ ನಡೆದ ಇತ್ತೀಚಿನ ತ್ರಿಕೋನ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಮಂಧನಾ, ಆರು ವರ್ಷಗಳ ಬಳಿಕ ಅಂದರೆ 2019ರ ನಂತರ ಮೊದಲ ಬಾರಿಗೆ ಏಕದಿನ ಕ್ರಿಕೆಟ್‌ನಲ್ಲಿ ಅಗ್ರ ಶ್ರೇಯಾಂಕ ಪಡೆದಿದ್ದರು. ಆದರೆ ಇಂಗ್ಲೆಂಡ್ ಸರಣಿಯಲ್ಲಿ ನಿರೀಕ್ಷಿತ ಪ್ರದರ್ಶನ ತೋರುಲು ವಿಫಲವಾದ ಕಾರಣ ಅಗ್ರಸ್ಥಾನ ಕಳೆದುಕೊಂಡರು. ಅಗ್ರಸ್ಥಾನಿ ನ್ಯಾಟ್ ಸಿವರ್-ಬ್ರಂಟ್ 731 ರೇಟಿಂಗ್ ಪಾಯಿಂಟ್ ಹೊಂದಿದ್ದಾರೆ. ಈ ಹಿಂದೆ ಎರಡನೇ ಸ್ಥಾನಿಯಾಗಿದ್ದ ದಕ್ಷಿಣ ಆಫ್ರಿಕಾದ ನಾಯಕಿ ಲಾರಾ ವೋಲ್ವಾರ್ಡ್ಟ್ ಮೂರನೇ ಸ್ಥಾನಕ್ಕೆ ಜಾರಿದ್ದಾರೆ. ಇಂಗ್ಲೆಂಡ್ ಸರಣಿಯ ಅಂತಿಮ ಪಂದ್ಯದಲ್ಲಿ ಶತಕ ಬಾರಿಸಿ ಮಿಂಚಿದ್ದ ಟೀಮ್ ಇಂಡಿಯಾ ನಾಯಕಿ ಹರ್ಮನ್‌ಪ್ರೀತ್ ಕೌರ್ 10 ಸ್ಥಾನಗಳ ಪ್ರಗತಿ ಸಾಧಿಸಿ 645 ರೇಟಿಂಗ್ ಅಂಕದೊಂದಿಗೆ 11ನೇ ಸ್ಥಾನ ಪಡೆದಿದ್ದಾರೆ. ಮಧ್ಯಮ ಕ್ರಮಾಂಕದ ಆಟಗಾರ್ತಿ ಜೆಮೀಮಾ ರಾಡ್ರಿಗಸ್ 2 ಸ್ಥಾನಗಳ ಏರಿಕೆ ಕಂಡು 13ನೇ ಸ್ಥಾನಿಯಾಗಿದ್ದಾರೆ. ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ 3 ಪಂದ್ಯಗಳಲ್ಲಿ 15.11ರ ಸರಾಸರಿಯಲ್ಲಿ ಒಟ್ಟು 9 ವಿಕೆಟ್‌ಗಳನ್ನು ಪಡೆದಿದ್ದ ಕ್ರಾಂತಿ ಗೌಡ್ ಬೌಲಿಂಗ್ ಶ್ರೇಯಾಂಕದಲ್ಲಿ ಬರೋಬ್ಬರಿ 58 ಸ್ಥಾನಗಳ ಜಿಗಿತದೊಂದಿಗೆ 62ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ದೀಪ್ತಿ ಶರ್ಮ ನಾಲ್ಕನೇ ಸ್ಥಾನದಲ್ಲೇ ಮುಂದುವರಿದಿದ್ದಾರೆ.
