ಉದಯವಾಹಿನಿ,ಬಾಗಲಕೋಟೆ : ಮುಂಗಾರು ಮಳೆ ಆರಂಭವಾಗಿ ತಿಂಗಳು ಕಳೆಯುತ್ತಾ ಬಂದರೂ ಮಳೆ ಸುರಿಯದ ಪರಿಣಾಮ ಶಿರೋಳ ಗ್ರಾಮದ ಮಹಿಳೆಯರು ಮಳೆಗಾಗಿ ಪ್ರಾರ್ಥಿಸಿ ಮಂಗಳವಾರ ಗುರ್ಜಿ ಪೂಜೆ ಮಾಡಿದರು. ಶಿರೋಳ ನವ ಗ್ರಾಮದ ಪ್ಲಾಟ್‌ನಲ್ಲಿ ಮಹಿಳೆಯರು ಗ್ರಾಮದ ಪ್ರತಿ ಮನೆಗೆ ಭೇಟಿ ನೀಡಿ ‘ಗುರ್ಜಿ ಗುರ್ಜಿ ಅಲ್ಲಾಡಿ ಬಂದೆ, ಹಳ್ಳಕೊಳ್ಳ ತಿರುಗಾಡಿ ಬಂದೆ, ಕಾರ ಮಳೆಯು ಕಪ್ಪತ ಮಳೆಯು ಸುರಿ ಸುರಿಯೋ ಮಳೆರಾಯ ‘ಎಂದು ಗುರ್ಜಿಯನ್ನು ಹೊತ್ತು ಮಳೆರಾಯನನ್ನು ನೆನೆಯಲಾಯಿತು. ಈ ಗುರ್ಜಿ ಪೂಜೆಯು ಗ್ರಾಮೀಣ ಭಾಗದಲ್ಲಿ ಹಲವು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಸಂಪ್ರದಾಯ. ಮಕ್ಕಳು, ರೈತ ಮಹಿಳೆಯರು ಐದು ದಿನ ತಲೆಯ ಮೇಲೆ ಕರಿಯ ಹೆಂಚು ಇಟ್ಟು ಅದರ ಮೇಲೆ ಆಕಳ ಸಗಣೆಯಿಂದ ತಯಾರಿಸಿದ ಗುರ್ಜಿ ಹೊರಿಸಿ ಅದರ ಹಿಂದೆ ರೈತರು, ರೈತ ಮಹಿಳೆಯರು ಹಾಡು ಹೇಳುತ್ತಾ ಗ್ರಾಮದ ಓಣಿಗಳಲ್ಲಿ ಸಂಚರಿಸಿ ಗುರ್ಜಿಗೆ ನೀರು ಸುರಿಸುತ್ತಾ ಪೂಜೆ ಮಾಡುತ್ತಾ ಪ್ರತಿ ಮನೆಯಿಂದ ಜೋಳ, ವಿವಿಧ ದವಸ ಧಾನ್ಯ ಹಾಗೂ ಹಣ ಸಂಗ್ರಹಿಸುತ್ತಾರೆ. ಐದನೇ ದಿನ ಊರಿನ ಜನರು ಒಂದೆಡೆ ಸೇರಿ ಜೋಳದ ನುಚ್ಚು, ಸಂಗಟಿ ಸಾರನ್ನು ತಯಾರಿಸಿ ಮಳೆಗಾಗಿ ಪ್ರಾರ್ಥಿಸಿ ಪ್ರಸಾದ ಮಾಡುತ್ತಾರೆ.
